ಬೆಂಗಳೂರು: ಒಂದು ದಶಕದ ಬಳಿಕ ಕಲ್ಯಾಣ ಕರ್ನಾಟಕದಲ್ಲಿ ಸಚಿವ ಸಂಪುಟದ ಸಭೆ ಇಂದು ನಡೆಯಲಿದೆ. ಕಲಬುರ್ಗಿ ನಗರ ಈ ಮಹತ್ವದ ಸಭೆಗೆ ವೇದಿಕೆ ಒದಗಿಸಲಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಸಚಿವ ಸಂಪುಟ ಸಭೆಯನ್ನು ನಡೆಸಬೇಕೆಂದು ಮೊದಲ ಬಾರಿಗೆ ಆಲೋಚಿಸಿದ್ದು ಮಾಜಿ ಸಿಎಂ ಆರ್.ಗುಂಡೂರಾವ್. 1982 ರಲ್ಲಿ ಮೊದಲ ಬಾರಿಗೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಅದಾದ ದಶಕದ ಬಳಿಕ ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯ ಮಂತ್ರಿಯಾಗಿದ್ದಾಗ ಸತತ ಮೂರು ವರ್ಷ ಸಂಪುಟ ಸಭೆ ನಡೆಸಿದರು. 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಬಳಿಕ ವಿವಿಧ ಕಾರಣಕ್ಕೆ ಕಲಬುರಗಿಯಲ್ಲಿ ಸಂಪುಟ ಸಭೆ ನಡೆದಿರಲಿಲ್ಲ. ದಶಕದ ಬಳಿಕ ಸಿದ್ದರಾಮಯ್ಯ ಅವರೇ ಮತ್ತೆ ಸಂಪುಟ ಸಭೆ ನಡೆಸಲು ತೀರ್ಮಾನಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳಿಗೆ ಅನುಮತಿ ನೀಡುವ ನಿಟ್ಟಿನಲ್ಲಿ ಮಂಗಳವಾರ ಬೆಳಗ್ಗೆ ಕಲಬುರಗಿಯ ಪ್ರಾದೇಶಿಕ ಕಚೇರಿಯಲ್ಲಿ ದಶಕದ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಆಡಳಿತಾ ತ್ಮಕ, ಶೈಕ್ಷಣಿಕ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ಲೋಕೋಪಯೋಗಿ, ಕೃಷಿ, ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು371(ಜೆ) ಕಲಂ ಅನ್ನು ಪರಿಣಾಮಕಾರಿ ಜಾರಿ, ಸ್ಥಳೀಯ ವೃಂದದ 30 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಸಂಪುಟ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ಸಚಿವರು ಸೋಮವಾರ ಸಂಜೆಯೇ ಕಲಬುರಗಿಗೆ ತೆರಳಿದ್ದಾರೆ. ಅಮೆರಿಕಕ್ಕೆ ತೆರಳಿದ್ದ ಡಿಸಿಎಂ ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದು ನಂತರ ಕಲಬುರಗಿಗೆ ತೆರಳಲಿದ್ದಾರೆ.