ಬೆಳಗಾವಿ:
ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಘಟನೆಯನ್ನು ತಡೆಯಲು ಯತ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಮೂವರಿಗೆ ಸನ್ಮಾನ ಮಾಡಲಾಗಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಪ್ರಕರಣವನ್ನು ತಕ್ಷಣ ತಡೆಯಲು ಸ್ಥಳೀಯ ನಿವಾಸಿಗಳು ಯತ್ನಿಸಿದ್ದರು. ಕೂಡಲೇ ಘಟನೆ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಅಮಾನುಷ ಘಟನೆ ತಡೆಯಲು ಯತ್ನಿಸಿದ್ದ ಮೂವರಿಗೆ ಕೋರ್ಟ್ ಪ್ರಶಂಸನೀಯ ಪತ್ರ ನೀಡಿತ್ತು.

ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಘಟನೆ ತಡೆಯಲು ಯತ್ನಿಸಿದ ವಂಟಮೂರಿ ಗ್ರಾಮದ ನಿವಾಸಿಗಳಾದ ಜಹಂಗೀ‌ರ್ ತಹಶೀಲ್ದಾ‌ರ್, ವಾಸಿಂ ಮಕಾನದಾ‌ರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹೊಳಿಕಾ‌ರ ಅವರನ್ನು ಸನ್ಮಾನಿಸಿ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದರು.

ಮೂವರಿಗೂ ತಲಾ 5 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ್ದ ಕಾಕತಿ ಠಾಣೆಯ ಪೊಲೀಸರನ್ನು ಸನ್ಮಾನಿಸಲಾಯಿತು.