ಮಂಗಳೂರು :ಒಂದೇ ಊರಿನಲ್ಲಿ ಎರಡು ಕಂಬಳ ನಡೆದ ಪ್ರಸಂಗ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿ ಎಂಬಲ್ಲಿ ನಡೆಯಿತು.

ಕಂಬಳ ನಡೆಯುವ ಜಾಗ ಹಾಗೂ ಎರಡು ಸಮಿತಿಗಳ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಜಿಲ್ಲಾ ಕಂಬಳ ಸಮಿತಿ ಪ್ರಯತ್ನಿಸಿದಾದರೂ ಸಾಧ್ಯವಾಗದ ಕಾರಣ ಎರಡು ಕಂಬಳ ಆಯೋಜನೆಗೊಂಡಿತ್ತು.

ಹೊಕ್ಕಾಡಿಗೋಳಿಯ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ಒಂದು ಕಂಬಳ ನಡೆದರೆ, ಮತ್ತೊಂದು ಕಂಬಳ ಅಲ್ಲೇ ಪಕ್ಕದ ಕೊಡಂಗೆ ಎಂಬಲ್ಲಿ ಜಿಲ್ಲಾ ಕಂಬಳ ಸಮಿತಿ ಬೆಂಬಲದಲ್ಲಿ ವೀರ ವಿಕ್ರಮ ಕಂಬಳ ಸಮಿತಿ ವತಿಯಿಂದ ನಡೆಯಿತು. ಎರಡೂ ಕಂಬಳಗಳ ಜೋಡುಕರೆಗಳಿಗೆ ವೀರ ವಿಕ್ರಮ ಎಂದೇ ಹೆಸರಿಡಲಾಗಿತ್ತು. ಶನಿವಾರ ಸ್ಥಳೀಯರು, ಗಣ್ಯರು ಎರಡೂ ಕಂಬಳಗಳಲ್ಲಿ ಪಾಲ್ಗೊಂಡರು. ಕಂಬಳ ಕೋಣಗಳ ಯಜಮಾನರು ತಮ್ಮ ಆಯ್ಕೆಯ ಕಂಬಳದಲ್ಲಿ ಭಾಗವಹಿಸಿದರು. ಕಂಬಳಾಭಿಮಾನಿಗಳು ಎರಡೂ ಕಡೆ ಹಂಚಿ ಹೋದರು. ಕೋಣಗಳ ಸಂಖ್ಯೆ, ಜನರ ಸಂಖ್ಯೆ ಇತರ ಕಂಬಳಗಳಿಗಿಂತ ಕಡಿಮೆ ಇದ್ದರೂ ಕುತೂಹಲಿಗರ ದಂಡು ಕಂಡುಬಂತು. ಒಂದು ಕಂಬಳದಲ್ಲಿ 99 ಜತೆ ಕೋಣಗಳು ಹಾಗೂ ಇನ್ನೊಂದು ಕಂಬಳದಲ್ಲಿ 115 ಜತೆ ಕೋಣಗಳು ಭಾಗವಹಿಸಿದ್ದು, ಗಮನಸೆಳೆಯಿತು.