ಹುಬ್ಬಳ್ಳಿ:
ಕರುನಾಡ 3,500 ಭಕ್ತರಿಗೆ ಫೆ. 19ರಂದು ಅಯೋಧ್ಯೆ ರಾಮಲಲ್ಲಾನ ದರ್ಶನ ಭಾಗ್ಯ ಕಲ್ಪಿಸಲಾಗಿದ್ದು, ರಾಜ್ಯದಿಂದ ಎರಡು ವಿಶೇಷ ರೈಲುಗಳು ಅಯೋಧ್ಯೆಗೆ ತೆರಳಲಿವೆ.

ಉತ್ತರ ಭಾರತದಲ್ಲಿ ವಿಪರೀತ ಚಳಿ ಕಾರಣ ಅಲ್ಲಿನ ರಾಜ್ಯಗಳ ಭಕ್ತರಿಗೆ ಮೊದಲಿಗೆ ಶ್ರೀರಾಮಲಲ್ಲಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಫೆಬ್ರವರಿ ಎರಡನೇ ವಾರದಿಂದ ಚಳಿ ಕಡಿಮೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳ ಭಕ್ತರಿಗೆ ದರ್ಶನಕ್ಕೆ ಸೂಚಿಸಲಾಗಿದೆ. ವಿಶ್ವ ಹಿಂದೂ ಪರಿಷತ್‌ ಮತ್ತು ಸಂಘ ಪರಿವಾರ ಪ್ರಯಾಣದ ಸಂಯೋಜನ ಕಾರ್ಯ ಮಾಡಲಿದ್ದು, ಅಯೋಧ್ಯೆಯಲ್ಲಿ ವಸತಿ- ಪ್ರಸಾದ ವ್ಯವಸ್ಥೆ ಕಲ್ಪಿಸಲಿವೆ. ರೈಲ್ವೇ ಇಲಾಖೆ ವಿವಿಧ ರಾಜ್ಯಗಳಿಂದ ನೇರವಾಗಿ ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ್ದು, ಪ್ರತೀ ರೈಲಿಗೆ ನೋಡಲ್‌ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಭಕ್ತರು ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ತೆರಳಲು ಮುಂಗಡ ಟಿಕೆಟ್‌ ಕಾಯ್ದಿರಿಸಿಕೊಳ್ಳಬೇಕಿದ್ದು, ಪ್ರಯಾಣ ವೇಳೆ ಉಪಾಹಾರ-ಊಟ ಕಲ್ಪಿಸಲಾಗುತ್ತಿದೆ.

ರಾಜ್ಯದಿಂದ ಎರಡು ರೈಲು :
ಕರ್ನಾಟಕದ ಭಕ್ತರಿಗೆ ರಾಮಲಲ್ಲಾ ದರ್ಶನಕ್ಕೆ ಫೆಬ್ರವರಿ 19ರಂದು ಸಮಯ ನೀಡಲಾಗಿದ್ದು, ಇದಕ್ಕಾಗಿ ಮೈಸೂರು-ಬೆಳಗಾವಿಯಿಂದ ಎರಡು ವಿಶೇಷ ರೈಲುಗಳು ಅಯೋಧ್ಯೆಗೆ ತೆರಳಲಿವೆ. ಕರಾವಳಿ ಸೇರಿ ದಕ್ಷಿಣ ಪ್ರಾಂತದ ಸುಮಾರು ಎರಡು ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಭಾಗದವರು ಮೈಸೂರಿನಿಂದ ಹೊರಡುವ ರೈಲಿನಲ್ಲಿ ಪ್ರಯಾಣ ಬೆಳೆಸಬೇಕಿದೆ. ಉತ್ತರ ಪ್ರಾಂತದ ಭಕ್ತರು ಬೆಳಗಾವಿಯಿಂದ ಹೊರಡುವ ರೈಲಿನಲ್ಲಿ ಪ್ರಯಾಣ ಬೆಳೆಸಬಹುದಾಗಿದ್ದು, ಈ ಭಾಗದಿಂದ ಸುಮಾರು 1,500 ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

42 ಎಕರೆಯಲ್ಲಿ ಅರಳಿದೆ ನಗರ :
ಅಯೋಧ್ಯೆಗೆ ತೆರಳುವ ಭಕ್ತರು ತಂಗುವುದಕ್ಕಾಗಿ ವಿಶ್ವ ಹಿಂದೂ ಪರಿಷತ್‌ನಿಂದ ಅಯೋಧ್ಯೆಯ ರೈಲ್ವೇ ನಿಲ್ದಾಣಕ್ಕೆ ಅನತಿ ದೂರದಲ್ಲಿ ಸುಮಾರು 42 ಎಕರೆ ಜಮೀನು ಈ ಹಿಂದೆಯೇ ಖರೀದಿಸಿದ್ದು, ಅದೇ ಜಾಗದಲ್ಲಿ ತಾತ್ಕಾಲಿಕ ನಗರಗಳನ್ನು ರೂಪಿಸಲಾಗಿದೆ. ಅಂದಾಜು 5-6 ಸಾವಿರ ಜನರು ಉಳಿಯುವುದಕ್ಕೆ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ತೆರಳಿದ್ದ ಮಠಾಧೀಶರು, ಸಂತರು, ವಿವಿಧ ಕ್ಷೇತ್ರಗಳ ಗಣ್ಯರನ್ನು ಉಳಿಸಿದ್ದು ಇದೇ ಟೆಂಟ್‌ಗಳಲ್ಲಿ. ಈಗ ಅವುಗಳನ್ನು ರಾಮಲಲ್ಲಾ ದರ್ಶನಕ್ಕೆ ಬರುವ ಭಕ್ತರ ಬಳಕೆಗೆ ಉದ್ದೇಶಿಸಲಾಗಿದೆ.