ಬ್ರಹ್ಮಾವರ : ಬ್ರಹ್ಮಾವರ ತಾಲೂಕಿನ ಬಾರ್ಕೂರು ಬಳಿಯ ಹೊಸಾಳ ಗ್ರಾಮದ ಸೀತಾನದಿಯಲ್ಲಿ ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರುಪಾಲಾದ ಘಟನೆ ನಡೆದಿದೆ. ಹೊಸಾಳ ಗ್ರಾಮದ ಶ್ರೀಷಾ-21 ಮತ್ತು ಪ್ರಶಾಂತ್ ಪೂಜಾರಿ -30 ಮೃತಪಟ್ಟವರು. ಸೋಮವಾರ ಬೆಳಗ್ಗೆ ಸಮಯದಲ್ಲಿ ಮೀನು ಹಿಡಿಯಲು ನಾಗರಮಠದ ಸೀತಾ ನದಿಗೆ ಹೋಗಿದ್ದರು. ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕರಿಬ್ಬರು ನೀರುಪಾಲಾಗಿದ್ದಾರೆ. ಅವರು ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ರಕ್ಷಣೆಗೆ ಯತ್ನಿಸಿದ್ದರೂ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಇಬ್ಬರು ನೀರುಪಾಲಾಗಿದ್ದಾರೆ. ಕೊನೆಗೆ ಈಜು ತಜ್ಞ ಈಶ್ವರ ಮಲ್ಪೆ, ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.