ಮೂಡುಬಿದಿರೆ: ನಾವು ಅಂಗಡಿಯಿಂದ ಖರೀದಿಸುವ ವಸ್ತುವಿನ ಉತ್ಪಾದನೆ ದಿನಾಂಕ ಮತ್ತು ಅವಧಿಯನ್ನು ಪರಿಶೀಲಿಸಬೇಕು. ಗುಣಮಟ್ಟ ಇಲ್ಲದ ಮತ್ತು ಅವಧಿ ಮೀರಿದ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ವಕೀಲೆ ಶ್ವೇತಾ ಜೈನ್‌ ಹೇಳಿದರು.

ಮಹಾವೀರ ಕಾಲೇಜಿನ ಬಳಕೆದಾರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಬಳಕೆದಾರರ ಹಕ್ಕುಗಳು ಮತ್ತು ಜವಾಬ್ದಾರಿಗಳು’ ಕುರಿತು ಅವರು ಮಾತನಾಡಿದರು.

ಹಣ ನೀಡಿ ಖರೀದಿಸಿದ ನಂತರ ರಶೀದಿಯನ್ನು ತಪ್ಪದೆ ಪಡೆದುಕೊಳ್ಳಬೇಕು. ವಸ್ತುವಿನಲ್ಲಿ ನ್ಯೂನತೆಗಳಿದ್ದರೆ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಪದವಿಪೂರ್ವ ಪ್ರಾಂಶುಪಾಲ ಪ್ರೊ.ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಹರೀಶ್‌, ಬಳಕೆದಾರರ ಸಂಘದ ಸಂಯೋಜಕರಾದ ಪದ್ಮಶ್ರೀ, ವಿದ್ಯಾರ್ಥಿ ಸಂಘದ ನಾಯಕಿ ಶೃತಿ ಎಸ್.ಪೆರಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ಪ್ರಜ್ವಲ್ ಸ್ವಾಗತಿಸಿ, ಹರ್ಷಿಣಿ ನಿರೂಪಿಸಿದರು.