ನಮ್ಮದು ಪ್ರಜಾಪ್ರಭುತ್ವವುಳ್ಳ ರಾಷ್ಟ್ರ. ಇಲ್ಲಿ ಪ್ರಜೆಗಳೇ ನಮ್ಮ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕರು. ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಅವರು ಹೊಣೆಗಾರಿಕೆಯಿಂದ ಮತದಾನ ಮಾಡಬೇಕು, ಲೋಕಸಭೆಗೆ ಚುನಾವಣೆಗಳು ಬಂದವು. ಎಲ್ಲರಿಗೂ ಸ್ಪರ್ಧಿಸುವ ಅಧಿಕಾರ ಇದೆ. ಆದರೆ ಯಾರನ್ನು ಆಯ್ಕೆ ಮಾಡಬೇಕೆನ್ನುವುದು ಮತದಾರರ ಹಕ್ಕು.

ಬರೀ ಅಗರ್ಭ ಶ್ರೀಮಂತರು, ಕೋಟ್ಯಾಧೀಶರು, ಉದ್ದಿಮೆದಾರರು, ಅಪಾರ ಬಂಡವಾಳ ತೊಡಗಿಸಿ ಮತದಾರರನ್ನು ಖರೀದಿಸುವ ಅರ್ಥಾತ್ ಆಸೆ ಆಮಿಷಗಳನ್ನು ಒಡ್ಡಿ ಕಾಣಿಕೆಗಳನ್ನು ನೀಡಿ ಆಯ್ಕೆಯಾಗುವಂತಾಗಬಾರದು. ಹಣವಿಲ್ಲದ ದುರ್ಬಲರು, ಬುದ್ಧಿಜೀವಿಗಳು, ರಾಷ್ಟ್ರದ ಕುರಿತು ಚಿಂತನೆ ಮಾಡುವವರು, ಧೈರ್ಯಶೀಲರು,ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಬಲ್ಲವರು,ಅರಳು ಹುರಿದಂತೆ ಮಾತನಾಡಬಲ್ಲವರು ಕೂಡ ಆಯ್ಕೆಯಾದಾಗ ಮಾತ್ರ ನಮ್ಮ ಲೋಕಸಭೆಗೆ ಒಂದು ಬೆಲೆ ಪ್ರಾಪ್ತವಾಗುತ್ತದೆ.

ಪ್ರಸಕ್ತದಲ್ಲಿ ಲೋಕಸಭೆಯಲ್ಲಿ ಬಾಯಿ ತೆರೆಯದ ಸಂಸದರು ಇದ್ದಾರೆ. ತಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆ ಅರಿಯದವರು ಇದ್ದಾರೆ. ಕೆಲವರು ಬರಿ ಮ್ಯಾಟ್ರಿಕ್ ಪಾಸ್, ಪಿಯು ಫೇಲ್, ಅಪರಾಧಗಳ ಆರೋಪ ಹೊತ್ತವರು ಇದ್ದಾರೆ. ನಮ್ಮ ಕರ್ನಾಟಕದಿಂದ ಆಯ್ಕೆಯಾಗಿ ಹೋದವರಲ್ಲಿ ಎಷ್ಟು ಸಂಸದರು ಸಮರ್ಥವಾಗಿ ಹಿಂದಿ ಮಾತನಾಡಲು ಶಕ್ತರಾಗಿದ್ದಾರೆ ಹೇಳಿ? ಮಾತನಾಡಲಿಕ್ಕೇ ಸಾಧ್ಯವಾಗದಿದ್ದರೆ ಬರಿ ಸರಕಾರಿ ಸೌಲಭ್ಯಗಳಿಗಾಗಿ, ತಮ್ಮ ಹಿತ ರಕ್ಷಣೆಗಾಗಿ ಸಂಸದರಾಗಬೇಕೇ ಹೇಳಿ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಭಾಷಾ ಜ್ಞಾನವನ್ನು ಪರಿಶೀಲಿಸಲಿ.

ಪ್ರಾ.ಬಿ.ಎಸ್.ಗವಿಮಠ
ಹಿರಿಯ ಸಾಹಿತಿ,ಬೆಳಗಾವಿ
ಬುಧವಾರ ೦೩/೦೧/೨೦೨೪