ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮೋದಿ, ಮೂರನೇ ಅವಧಿಗೆ ಪ್ರಧಾನಿಯಾಗಿದ್ದು, ಭಾರತವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. 2014ರಿಂದ ಭಾರತದ ಪ್ರಧಾನಿಯಾಗಿರು ನರೇಂದ್ರ ಮೋದಿ, ಅನೇಕ ಬದಲಾವಣೆಗಳನ್ನು ಜಾರಿಗೆ ತಂದ್ರು. ಅದ್ರಲ್ಲಿ 75 ವರ್ಷ ಮೇಲ್ಪಟ್ಟ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡದಿರುವುದು ಸೇರಿದೆ.

2014ರಲ್ಲಿ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ದೂರವಿಟ್ಟಿದ್ದ ಮೋದಿ, ಮಧ್ಯಪ್ರದೇಶದಲ್ಲೂ ಈ ನಿಮಯ ಮುಂದುವರೆಸಿದ್ರು. 80 ದಾಟಿದ ನಂತರ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೂ ಯಾವುದೇ ಜವಾಬ್ದಾರಿಯನ್ನು ನೀಡಲಾಗಿಲ್ಲ. ಹಾಗಿದ್ರೆ ಮೋದಿಗೂ ಈ ನಿಯಮ ಅನ್ವಯವಾಗುತ್ತಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು.

ಮೋದಿ ಎಂಬ ವಿಶ್ವದ ಧೀಮಂತ ನಾಯಕ, ವಿದೇಶಗಳ ದೃಷ್ಟಿಯಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟ ನಾಯಕ. ಬೇರೆ ದೇಶಗಳಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರುವಲ್ಲಿ ಮೋದಿ ಅವರ ವಿದೇಶಾಂಗ ನೀತಿಗಳು ಅತ್ಯಂತ ಜನಪ್ರಿಯವಾಗಿವೆ. ಕೋವಿಡ್ ಸೇರಿದಂತೆ ಇತರ ಸಂದರ್ಭಗಳಲ್ಲಿ ವಿದೇಶಗಳು ಎದುರಿಸಿದ ಸಂಕಷ್ಟದ ಸಂದರ್ಭದಲ್ಲಿ ಮೋದಿ ಆ ದೇಶಗಳಿಗೆ ನೆರವಿನ ಹಸ್ತ ಚಾಚುವ ಮೂಲಕ ಜಗತ್ತಿನ ದೇಶಗಳ ಪ್ರೀತಿ ಪಾತ್ರ ನಾಯಕರಾಗಿ ಹೊರಹೊಮ್ಮಿದ್ದಾರೆ. ಭಾರತ ತನ್ನ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಚೀನಾಗಳ ಜೊತೆ ಆಗಾಗ ಸಂಘರ್ಷ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕೆಲ ವರ್ಷಗಳ ಹಿಂದೆ ಮೋದಿ ಅವರ ದಿಟ್ಟ ನಿರ್ಧಾರದ ಫಲವಾಗಿ ಚೀನಾ ಮತ್ತು ಪಾಕಿಸ್ತಾನ ಬೆದರಿರುವುದು ಗತ ಇತಿಹಾಸ. ಕೇಂದ್ರ ಗೃಹ ಸಚಿವ ಅಮಿತ್ ಷಾ, ವಿದೇಶಾಂಗ ಸಚಿವ ಜೈ ಶಂಕರ್ ಹಾಗೂ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರ ಹೆಸರು ಕೇಳಿದರೆ ಜಗತ್ತಿನ ಕೆಲ ದೇಶಗಳಲ್ಲಿ ಸಂಚಲನ ಉಂಟಾಗುತ್ತದೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೋದಿಯವರ ನಾಯಕತ್ವ ಹತ್ತು ವರ್ಷದಿಂದ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ.

2024 ಲೋಕಸಭೆ ಚುನಾವಣೆ ವೇಳೆ ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಚುನಾವಣಾ ಪ್ರಚಾರಕ್ಕೆ ಮರಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೋದಿಯವರ ಬಗ್ಗೆ ಮಾತನಾಡಿದ್ದರು. ಸೆಪ್ಟೆಂಬರ್ 17ರಂದು ಮೋದಿಗೆ 75 ವರ್ಷವಾಗಲಿದೆ. ನೀವು ಈಗ ಮೋದಿಗೆ ಮತ ಹಾಕಿದ್ರೆ ಅದು ಅಮಿತ್ ಷಾ ಅವರಿಗೆ ಮತ ಹಾಕಿದಂತೆ. ಮೋದಿ 75 ವರ್ಷವಾಗ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎಂದಿದ್ದರು. ಈ ಚರ್ಚೆಗೆ, ಪ್ರಚಾರದ ವೇಳೆಯೇ ಅಮಿತ್ ಷಾ ತೆರೆ ಎಳೆದಿದ್ದರು. ನರೇಂದ್ರ ಮೋದಿಗೆ 75 ವರ್ಷವಾಗ್ತಿದ್ದಂತೆ ಅವರು ರಾಜೀನಾಮೆ ನೀಡ್ತಾರೆಯೇ ಎಂದು ಪ್ರಶ್ನೆ ಮಾಡ್ಬೇಕಾಗಿಲ್ಲ,ನರೇಂದ್ರ ಮೋದಿ, ರಾಜೀನಾಮೆ ನೀಡದೆ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದಿದ್ದರು. ಬಿಜೆಪಿ ನಿಯಮದಲ್ಲಿ ಎಲ್ಲೂ ಈ ಬಗ್ಗೆ ಬರೆಯಲಾಗಿಲ್ಲ ಎಂದು ಅಮಿತ್ ಷಾ ಸ್ಪಷ್ಟನೆ ನೀಡಿದ್ರು.

ನರೇಂದ್ರ ಮೋದಿ ಎಲ್ಲ ನಾಯಕರಂತಲ್ಲ. ಅವರ ವಯಸ್ಸು ಬರಿ ಲೆಕ್ಕಕ್ಕೆ ಮಾತ್ರ ಎಂಬುದು ಎಲ್ಲರಿಗೂ ತಿಳಿದ ಸಂಗತಿ. 75ನೇ ವಯಸ್ಸಿನಲ್ಲೂ 25ರ ಯುವಕನಂತೆ ಓಡಾಡುವ ನರೇಂದ್ರ ಮೋದಿ ಸಾಕಷ್ಟು ವಿಶೇಷ ಗುಣಗಳನ್ನು ಹೊಂದಿದ್ದಾರೆ. ಮೋದಿ ನಾಯಕತ್ವ ಶೈಲಿ ಪರಿಣಾಮಕಾರಿ ಮತ್ತು ಕ್ರಿಯಾಶೀಲವಾಗಿದೆ. ಸಾರ್ವಜನಿಕರ ಮಧ್ಯೆ ಇದ್ದು ಅವರ ಸಮಸ್ಯೆ ಅರಿಯುವ ಪ್ರಯತ್ನವನ್ನು ಮೋದಿ ಮಾಡ್ತಾರೆ. ಪ್ರಧಾನಿ ಮೋದಿಯವರ ಸಂವಹನ ಕೌಶಲ್ಯವು ತುಂಬಾ ಪ್ರಬಲವಾಗಿದೆ. ಅವರು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಸಾರ್ವಜನಿಕರಿಗೆ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಪ್ರಧಾನಿ ಮೋದಿ ದೂರದೃಷ್ಟಿ ಹೊಂದಿದ್ದು, ಅವರ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಮತ್ತು ಡಿಜಿಟಲ್ ಇಂಡಿಯಾದಂತಹ ಯೋಜನೆಗಳು ಇದಕ್ಕೆ ಸ್ಪಷ್ಟ ಉದಾಹರಣೆ. ಇದೇ ಇತರ ನಾಯಕರಿಗಿಂತ ಅವರನ್ನು ಭಿನ್ನವಾಗಿ ನಿಲ್ಲಿಸಿದೆ. ಭಾರತದ ಅಂತರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಭಾರತದ ಜಾಗತಿಕ ಸ್ಥಾನಮಾನವನ್ನು ಸುಧಾರಿಸಿದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ಮೋದಿಯನ್ನು ಅನನ್ಯ ಮತ್ತು ಪ್ರಭಾವಿ ನಾಯಕನನ್ನಾಗಿ ಮಾಡಿದೆ.

75ನೇ ವಯಸ್ಸಿನಲ್ಲೂ ಮೋದಿ ಫಿಟ್ನೆಸ್ ಮತ್ತು ಆರೋಗ್ಯವಾಗಿರಲು ಅವರ ದಿನಚರಿ, ಯೋಗ, ಧ್ಯಾನ, ಆಹಾರ ಕ್ರಮ ಕಾರಣ. ನಿತ್ಯ ಯೋಗ ಮಾಡುವ ಪ್ರಧಾನಿ, ಸಮತೋಲಿತ ಆಹಾರವನ್ನು ಸೇವನೆ ಮಾಡ್ತಾರೆ. ಮಾನಸಿಕ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಅವರು, ಅತ್ಯಂತ ಶಿಸ್ತುಬದ್ಧ ದಿನಚರಿ ರೂಢಿಸಿಕೊಂಡಿದ್ದಾರೆ. ಸಕಾರಾತ್ಮಕ ಆಲೋಚನೆ ಅವರ ಬಲವನ್ನು ಹೆಚ್ಚಿಸಿದೆ. ನಮ್ಮ ಅವಧಿಯನ್ನು ಮೋದಿ ಯಶಸ್ವಿಯಾಗಿ ಪೂರೈಸಲಿದ್ದು, ವಯಸ್ಸಿನ ಜೊತೆ ಬರುವ ಸವಾಲುಗಳನ್ನು ಎದುರಿಸಲು ಮೋದಿ ಸಿದ್ಧರಾಗಿದ್ದಾರೆ.