ಬೆಂಗಳೂರು: ಹಿರಿಯ ನ್ಯಾಯವಾದಿ, ಹಿಂದುಳಿದ ಆಯೋಗಗಳ ಅಧ್ಯಕ್ಷ, ಮಾಜಿ ಸಚಿವ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದ್ದು, ಇಷ್ಟರಲ್ಲೇ ಕಾಂಗ್ರೆಸ್ ಪಾಲಾಗಲಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ತಯಾರಿ ನಡೆಯುತ್ತಿದೆ. ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಗಳು ಟಿಕೆಟ್ ಸಿಗುವ ನಿಟ್ಟಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಪರ್ಯಟನೆಯ ಪರ್ವ ಶುರುವಾಗಿದೆ. ಈ ನಿಟ್ಟಿನಲ್ಲಿ ಇದೀಗ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಹೆಸರು ಕೇಳಿಬಂದಿದೆ.

ಜಯಪ್ರಕಾಶ ಹೆಗ್ಡೆ ಬಿಜೆಪಿ ತ್ಯಜಿಸಿ ಇಂದೇ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಲಕ್ಷಣಗಳಿವೆ. ಅಂದ ಹಾಗೇ ಜಯಪ್ರಕಾಶ ಹೆಗ್ಡೆ 2012 ರ ಲೋಕಸಭಾ ಉಪಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದರು. ಆದರೆ, ಅನಂತರ ನಡೆದ ಬೆಳವಣಿಗೆಗಳಲ್ಲಿ ಬಿಜೆಪಿಯತ್ತ ಮುಖ ಮಾಡಿದ್ದರು.. ಇದೀಗ ಮುಂಬರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಲೋಕಸಭೆಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಅಂಶುಮತ್ ಗೆ ನಿಗಮ ಮಂಡಳಿ ಪಟ್ಟ ನೀಡಲು ಕಾಂಗ್ರೆಸ್‌ ನಿರ್ಣಯಿಸಿದ್ದು, ಹೀಗಾಗಿ ಹೈಕಮಾಂಡ್ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆಗೆ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಸಂದೇಶ ರವಾನಿಸಲಾಗಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜಯಪ್ರಕಾಶ ಹೆಗ್ಡೆಯವರ ಬಂಟ ಸಮುದಾಯದ ಮತಗಳು ಅತ್ಯಂತ ನಿರ್ಣಾಯಕವಾಗಿವೆ. ಹೀಗಾಗಿ ಕಾಂಗ್ರೆಸ್ ಗೆಲುವಿಗೆ ಇದು ರಹದಾರಿಯಾಗಬಲ್ಲದು ಎಂಬುದು ಕಾಂಗ್ರೆಸ್ ಪಕ್ಷದ ಚಿಂತನೆಯಾಗಿದೆ. ಒಂದು ವೇಳೆ ಜಯಪ್ರಕಾಶ ಹೆಗ್ಡೆ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸುವುದು ನಿರಾಯಾಸವಾಗಬಹುದು. ಸ್ವಜಾತಿ ಪ್ರೇಮದಿಂದ ಜಯಪ್ರಕಾಶ ಹೆಗ್ಡೆ ಅವರಿಗೆ ಕರಾವಳಿ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಮತಗಳು ಹರಿದು ಬರಲಿವೆ. ಗೆಲುವು ಸುಲಭವಾಗಬಹುದು. ಹೀಗಾಗಿ ಕಾಂಗ್ರೆಸ್ ಪಕ್ಷ ಅವರಿಗೆ ಲೋಕಸಭಾ ಟಿಕೆಟ್ ನೀಡುವುದು ನೀಡುವುದರಲ್ಲಿ ಯಾವ ಸಂದೇಹ ಇಲ್ಲ ಎನ್ನಲಾಗಿದೆ.

ಈ ನಡುವೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಅವರನ್ನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮುಂದುವರಿಸಿದೆ. ಈ ಎಲ್ಲಾ ಲಕ್ಷಣಗಳು ಜಯಪ್ರಕಾಶ ಹೆಗ್ಡೆ ಅವರಿಗೆ ಕಾಂಗ್ರೆಸ್ ಸರ್ಕಾರದ ಕೃಪಾಕಟಾಕ್ಷ ಇರುವುದನ್ನು ಸಾಬೀತುಪಡಿಸಿವೆ.

ಬಿಜೆಪಿ ಈಗಾಗಲೇ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಾಕಷ್ಟು ವಿರೋಧದ ನಡುವೆ ಮತ್ತೊಮ್ಮೆ ಟಿಕೆಟ್ ನೀಡಲು ಮುಂದಾಗಿದೆ. ಬಿಜೆಪಿ ಆಡಳಿತ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಮುಂಬರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿರುವ ಬೆನ್ನಲ್ಲೇ ಜಯಪ್ರಕಾಶ ಹೆಗ್ಡೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

ಈ ಮೊದಲು ಅಸ್ತಿತ್ವದಲ್ಲಿದ್ದ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಜಯಪ್ರಕಾಶ ಹೆಗ್ಡೆ ಮೂರು ಸಲ ದಿಗ್ವಿಜಯ ಸಾಧಿಸಿದ್ದರು. ಉಡುಪಿ, ಬ್ರಹ್ಮಾವರ, ಕುಂದಾಪುರ ಭಾಗದಲ್ಲಿ ಜಯಪ್ರಕಾಶ ಹೆಗ್ಡೆ
ಭಾರೀ ಹಿಡಿತ ಹೊಂದಿದ್ದಾರೆ. ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಇಲ್ಲಿದ್ದು ಚುನಾವಣೆಯಲ್ಲಿ ಇದೆಲ್ಲ ಅಂಶಗಳು ಭಾರಿ ಲಾಭವಾಗಿ ಮತವಾಗಿ ಪರಿವರ್ತಿಸುವುದರಲ್ಲಿ ಯಾವ ಸಂದೇಹ ಇಲ್ಲ. ಇವೆಲ್ಲವನ್ನು ಲೆಕ್ಕಾಚಾರ ಹಾಕಿಯೇ ಕಾಂಗ್ರೆಸ್ ಪಕ್ಷ ಅವರಿಗೆ ಲೋಕಸಭಾ ಟಿಕೆಟ್ ನೀಡಲು ಮುಂದಾಗಿದೆ ಎಂಬ ಮಾತು ವ್ಯಕ್ತವಾಗಿದೆ.

ಜನತಾ ಪರಿವಾರ ಮೂಲದ ಜಯಪ್ರಕಾಶ ಹೆಗ್ಡೆ ಅವರು ಬಲಶಾಲಿ ನಾಯಕರಾಗಿದ್ದು, ಬ್ರಹ್ಮಾವರ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಹಲವು ಬಾರಿ ಸಚಿವರಾಗಿದ್ದವರು. ಬ್ರಹ್ಮಾವರ ಕ್ಷೇತ್ರ ರದ್ದಾದ ಬಳಿಕ ಅತಂತ್ರರಾದದಂತೆ ಕಂಡುಬಂದ ಅವರು ಬಳಿಕ ಕಾಂಗ್ರೆಸ್‌ ಸೇರಿದ್ದರು. 2009 ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅವರು ಬಿಜೆಪಿಯ ಡಿ.ವಿ. ಸದಾನಂದ ಗೌಡ ವಿರುದ್ಧ ಸೋಲು ಅನುಭವಿಸಿದ್ದರು. 2012 ರಲ್ಲಿ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಯಪ್ರಕಾಶ ಹೆಗ್ಡೆ ಈಗಿನ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಎದುರು ಜಯ ಸಾಧಿಸಿದ್ದರು. ಆದರೆ, 2014 ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರ ಎದುರು ಸೋಲು ಕಂಡರು.

ಈ ನಡುವೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ವಿರುದ್ಧ ಅವರು ಕಣಕ್ಕಿಳಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲನುಭವಿಸಿತ್ತು ಮಾತ್ರವಲ್ಲ, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಿಂತ ಜಯಪ್ರಕಾಶ ಹೆಗ್ಡೆ ಅವರಿಗೇ ಹೆಚ್ಚು ಮತ ಸಿಕ್ಕಿತ್ತು.

ಇದಾದ ಬಳಿಕ ಸ್ವಲ್ಪ ಕಾಲ ರಾಜಕೀಯದಿಂದಲೇ ದೂರವಿದ್ದ ಅವರು ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು. ಈ ಹಂತದಲ್ಲಿ ವರ್ಚಸ್ವಿ ವ್ಯಕ್ತಿತ್ವ ಹೊಂದಿರುವ ಅವರನ್ನು ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಸೆಳೆಯುವ ಪ್ರಯತ್ನ
ಇನ್ನಿಲ್ಲದಂತೆ ನಡೆಯುತ್ತಿದೆ.