ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಳಗಾವಿಗೆ ಕರೆಸಿ ಪ್ರಚಾರ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಕೇಳುತ್ತಿದ್ದು ಈ ಬಗ್ಗೆ ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡುವುದಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿ ಉತ್ತರ ನೀಡಲಾಗುವುದು. ರಾಜ್ಯದ ಜನತೆ ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡಲಾಗಿದೆ. ಬಿಜೆಪಿ ಮಹಿಳೆಯರನ್ನು ನಿರ್ಲಕ್ಷ ಮಾಡಿಲ್ಲ. ಬೆಳಗಾವಿಯಲ್ಲಿ ಹಾಲಿ ಸಂಸದೆ ಮಂಗಲಾ ಅಂಗಡಿ ಅವರ ಅಭಿಪ್ರಾಯ ಪಡೆದುಕೊಂಡೆ ಜಗದೀಶ ಶೆಟ್ಟರ್ ಅವರನ್ನು ನಿಲ್ಲಿಸಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಯಾವುದೇ ಅಸಮಾಧಾನ ಇಲ್ಲ. ಎರಡು ಪಕ್ಷಗಳು ಒಂದಾಗಿದ್ದರಿಂದ ನಮ್ಮ ಬಲ ಈಗ ಹೆಚ್ಚಿದೆ. ಜೆಡಿಎಸ್ ಅನ್ನು ನಿರ್ಲಕ್ಷ ಮಾಡುವುದಿಲ್ಲ, ಎಲ್ಲೇ ಹೋದರೂ ಪ್ರಧಾನಿ ಮೋದಿ ಅವರ ಅಲೆ ಕೇಳುತ್ತಿದ್ದೇವೆ. ರಾಜ್ಯದ ಉದ್ದಗಲಕ್ಕೂ ಭರ್ಜರಿ ಪ್ರಚಾರ ಆರಂಭಿಸಿದ್ದು ಜಿಲ್ಲೆಯಲ್ಲೂ ವಿಧಾನಸಭೆವಾರು ಪ್ರಚಾರ ಮಾಡಲಾಗುತ್ತದೆ. ಜಿಲ್ಲೆಯ ಪ್ರಮುಖ ನಾಯಕರ ಜೊತೆ ಮಾತುಕತೆ ಮಾಡುತ್ತಿದ್ದು ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ ಎಂದು ತಿಳಿಸಿದರು
ಜಗದೀಶ ಶೆಟ್ಟರ್ ಅವರಂತಹ ದೊಡ್ಡ ನಾಯಕ ಬೇಕು ಎಂಬ ಕಾರಣಕ್ಕೆ ನಾವು ಅವರನ್ನು ಮತ್ತೆ ಪಕ್ಷಕ್ಕೆ ಕರೆದುಕೊಂಡು ಬಂದಿದ್ದೇವೆ. ಅವರು ಹೊರಗಿನವರು ಎಂಬ ಭಾವನೆ ಯಾರಲ್ಲೂ ಇಲ್ಲ. ಅವರು ಸಹ ಅತ್ಯಂತ ಸಂತೋಷದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದರು.