ಬೆಳಗಾವಿ:
ಅಧ್ಯಾತ್ಮದಿಂದ ಸರ್ವ ರೋಗಗಳು ದೂರವಾಗುತ್ತವೆ. ಹೀಗಾಗಿ ಪ್ರತಿಯೊಬ್ಬರು
ತಮ್ಮ ಜೀವನದಲ್ಲಿ ಅಧ್ಯಾತ್ಮ ಸಾಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮುಂಬೈ
(ಠಾಣೆಯ) ಅಧ್ಯಾತ್ಮ ಕೇಂದ್ರ ಭಕ್ತಿ ವೇದಾಂತ ಆಸ್ಪತ್ರೆ ಪ್ರಾಧ್ಯಾಪಕಿ ಡಾ.
ಕೋಮಲ್ ದಲಾಲ್ ಹೇಳಿದರು.
ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ತಮಗೆ ಕೊಡಮಾಡಲಾದ “ಆತ್ಮ ಸ್ವಾಸ್ಥ್ಯ ಶ್ರೀ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ದೈಹಿಕ ಮಾತ್ರವಲ್ಲ, ಮಾನಸಿಕ ರೂಪದಲ್ಲಿ ಸ್ವಸ್ಥವಾಗಿದ್ದಾಗ
ಮಾತ್ರ ಆತ ಸಂಪೂರ್ಣ ಆರೋಗ್ಯವಂತನೆಂದು ಹೇಳಬಹುದು. ನಮ್ಮ ಜೀವನದಲ್ಲಿ ನಾವು ಕನಿಷ್ಠ
ತತ್ವಗಳನ್ನು ಪಾಲಿಸಲೇಬೇಕು. ಇಲ್ಲದೆ ಹೋದಲ್ಲಿ ಕಷ್ಟಗಳು ತಪ್ಪಿದ್ದಲ್ಲ. ಅತ್ಯಂತ ಗಂಭೀರ
ಪ್ರಮಾಣದ ರೋಗಗಳನ್ನು ಅಧ್ಯಾತ್ಮ ಸಾಧನೆಯಿಂದ ಮತ್ತು ನಿರಂತರ ಮಂತ್ರಗಳ
ಶ್ರವಣದಿಂದ ಗುಣಪಡಿಸಲು ಸಾಧ್ಯ ಎಂಬುದನ್ನು ತಮ್ಮ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿ ಅವರನ್ನು ಗುಣಪಡಿಸಲಾಗಿದೆ ಎಂದು ಅವರು ಉದಾಹರಣೆ
ಸಹಿತ ವಿವರಿಸಿದರು.

ಅಧಿಕ ರಕ್ತದ ಒತ್ತಡ ಮತ್ತು ಅಧಿಕ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ
ಅಲ್ಲದೆ ಡಿಪ್ರೆಶನ್ ಗೆ ಒಳಗಾದ ರೋಗಿಗಳಿಗೆ ನಿರಂತರವಾಗಿ ಮಂತ್ರಗಳ ಶ್ರವಣದಿಂದ
ಅತ್ಯಂತ ಕಡಿಮೆ ಸಮಯದಲ್ಲಿ ಸಂಪೂರ್ಣವಾಗಿ ಗುಣಮುಖರನ್ನಾಗಿ ಮಾಡಲಾಗಿದೆ.
ಕ್ಯಾನ್ಸರ್ ನಂತೆ ಅತ್ಯಂತ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಮಾನಸಿಕವಾಗಿ
ಸಂಪೂರ್ಣವಾಗಿ ಕುಗ್ಗಿ ಹೋದವರು ಜೀವನದಲ್ಲಿ ಎಲ್ಲಾ ಆಸೆಗಳನ್ನು ಕಳೆದುಕೊಂಡು
ಹತಾಶರಾದವರನ್ನು ಅಧ್ಯಾತ್ಮಿಕ ಉಪಚಾರದಿಂದ ಗುಣಪಡಿಸಿ ಯಶಸ್ವಿಯಾಗಿದೆ ಎಂದ ಅವರು
ಎಲ್ಲದಕ್ಕೂ ಶೃದ್ದೆ ಮತ್ತು ವಿಶ್ವಾಸ ಬಹಳ ಮುಖ್ಯವಾಗಿದೆ. ನಾನು ನಾನು ಎನ್ನುವುದನ್ನು
ಬಿಡಬೇಕು ಅಹಂಕಾರದಿಂದ ದೂರವಾಗಿ ದೇವರ ಅಸ್ತಿತ್ವ ಇದೆ. ಆತ ನಮಗೆ ಸಹಾಯ ಮಾಡುತ್ತಾನೆ
ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಆಗ ಅಧ್ಯಾತ್ಮದಿಂದ ಖಂಡಿತವಾಗಿ ಆರೋಗ್ಯ
ಸಂಬಂಧಿ, ಮಾನಸಿಕ ಸಂಬಂಧಿ ಮತ್ತು ಸಾಮಾಜಿಕ ಸಂಬಂಧಿ ಉತ್ತಮ ಪರಿಹಾರ ಮತ್ತು ಫಲಿತಾಂಶ
ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.

ಅನಗತ್ಯವಾಗಿ ವಿಚಾರಗಳನ್ನು ಮಾಡುತ್ತಾ ನಾವು ಅತಿಯಾದ ಆಸೆಗಳನ್ನು ಇಟ್ಟುಕೊಂಡು
ದುಃಖಗಳಾಗಿದ್ದೇವೆ. ಮಾನವ ಜನ್ಮ ವಿಶಿಷ್ಟವಾದದ್ದು ಕೆಲವು ಬಾರಿ ಸನ್ಮಾರ್ಗದಲ್ಲಿ
ನಡೆಯದೆ ಪ್ರಾಣಿಗಳಿಗಿಂತ ಕೆಟ್ಟದಾಗಿ ವರ್ತಿಸುತ್ತೇವೆ ಇದೇ ಕಾರಣದಿಂದ ನಿದ್ದೆ
ಇಲ್ಲದೆ ಸಮಾಧಾನವಿಲ್ಲದೆ ದುಃಖಗಳಾಗಿರುತ್ತೇವೆ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯತ್ತ
ಮುಖ ಮಾಡಿದ ಅಸಂಖ್ಯ ಉದಾಹರಣೆಗಳಿವೆ ಇದಕ್ಕೆಲ್ಲ ಒಂದೇ ಮಾರ್ಗ ಅದು ಅಧ್ಯಾತ್ಮ ಸಾಧನೆ,
ಪ್ರಕೃತಿಯು ಪಶು ಪ್ರಾಣಿಗಳಿಂದ ಹಿಡಿದು ಮನುಷ್ಯನವರೆಗೆ ಎಲ್ಲರಿಗೂ ಸ್ವರಕ್ಷಣಾತ್ಮಕ
ಅನುಕೂಲಗಳನ್ನು ನೀಡಿದೆ ಅದರಲ್ಲೂ ಮನುಷ್ಯನಿಗೆ ವಿಶಿಷ್ಟವಾದ ವಿಚಾರ ಶಕ್ತಿಯನ್ನು
ಬಲವನ್ನು ನೀಡಿದೆ. ಅದರ ಸದುಪಯೋಗವಾಗಬೇಕು. ದಯೆ, ಕರುಣೆ, ಅಧ್ಯಾತ್ಮ ನಡೆ ನುಡಿಗಳನ್ನು ಅನುಸರಿಸಿಕೊಂಡು ಹೋಗಬೇಕು. ಇಷ್ಟ ದೈವದ ಆರಾಧನೆಯ ಮೂಲಕ ಅಧ್ಯಾತ್ಮದ ಸಾಧನೆ ಮಾಡಬೇಕು.
ಅಂದಾಗ ಜೀವನ ಅತ್ಯಂತ ಸುಖವಾಗಿರುತ್ತದೆ ಎಂದವರು ಹೇಳಿದರು.

ಸಾನ್ನಿಧ್ಯವನ್ನು ಅರಭಾವಿ-ಕಡೋಲಿಯ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ
ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದ
ನೇತೃತ್ವವನ್ನು ಅಥಣಿಯ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು
ವಹಿಸಿದ್ದರು. ಸಮ್ಮುಖದಲ್ಲಿ ರಾವೂರ್ ವಿರಕ್ತ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
ಮತ್ತು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು
ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ನಾಗನೂರು ರುದ್ರಾಕ್ಷಿ ಮಠದ ಪ್ರಸಾದ ನಿಲಯಗಳ
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ವಹಿಸಿದ್ದರು.

ಆತ್ಮ ಸ್ವಾಸ್ಥ್ಯಶ್ರೀ ಪ್ರಶಸ್ತಿಯನ್ನು ಸ್ಥಾಪಿಸಿದ ಡಾ.ಎಚ್.ಬಿ. ರಾಜಶೇಖರ
ದಂಪತಿಗಳನ್ನು ಶ್ರೀ ಮಠದಿಂದ ಗೌರವಿಸಲಾಯಿತು.

ಶ್ರೀಮಠದಿಂದ ಕೊಡಮಾಡಲಾಗುವ ಪ್ರಸಾದ ಶ್ರೀ ಗೌರವ ಪ್ರಶಸ್ತಿಯನ್ನು ಬೆಳಗಾವಿಯ
ವೈ.ಎನ್.ಶಿಂತ್ರೆ , ಶೇಗುಣಶಿಯ ಮಲ್ಲಪ್ಪ ಬಸಗೌಡ ಗೌಡಪ್ಪನವರ್, ಬೆಳಗಾವಿಯ
ಬಸಲಿಂಗಪ್ಪ ರುದ್ರಪ್ಪ ಮೆಳವಂಕಿ, ಬೆಳಗಾವಿಯ ಜಿ.ಎನ್.ಪಾಟೀಲ ಇವರಿಗೆ
ನೀಡಿ ಗೌರವಿಸಲಾಯಿತು.
ಶ್ವೇತಾ ಮುಂಗರವಾಡಿ ಅವರಿಗೆ
ಡಾ. ಎಚ್ .ಬಿ. ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ
ಸ್ವಾಗತಿಸಿದರು.

ಪ್ರೊ.ಮಂಜುನಾಥ ಶರಣಪ್ಪನವರ ಮತ್ತು ರಾಜಶೇಖರ ಪಾಟೀಲ
ನಿರೂಪಿಸಿ, ವಂದಿಸಿದರು.

ಶಿವಮೊಗ್ಗದ ಶಾಸಕ ಎಸ್.ಎಂ.ಚನ್ನಬಸಪ್ಪ,
ಡಾ.ಎಫ್.ವಿ.ಮಾನ್ವಿ, ಸುರೇಶ ಗಾಡವಿ, ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ
ಬ್ಯಾಕೋಡ, ಶೈಲಜಾ ಭಿಂಗೆ, ಅಶೋಕ ಮಳಗಲಿ, ಮಾಜಿ ನಗರಸೇವಕಿ ಸರಳಾ ಹೇರಕರ ಸೇರಿ ಹಲವು
ಗಣ್ಯರು ಉಪಸ್ಥಿತರಿದ್ದರು.