ಹೆಬ್ರಿ : ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಒಂಟಿ ಸಲಗದ ಹಾವಳಿ ಹೆಚ್ಚಿದೆ. ಒಂದು ವಾರದ ಅವಧಿಯಲ್ಲಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಕೆದ್ದಲಮಕ್ಕಿ ಉಷಾ ಮನೆಯವರ ಹಲಸು ಹಾಗೂ ಅಡಕೆ ಮರ ದೂಡಿ ಹಾಕಿದ್ದು ಭತ್ತದ ಗದ್ದೆಯನ್ನು ಮೆಟ್ಟಿಕೊಂಡು ಹೋಗಿದ್ದು ಕೃಷಿಯನ್ನು ಹಾನಿಗೊಳಿಸಿದೆ. ಬೊಬ್ಬರ್‌ಬೆಟ್ಟು ಸುಬ್ರಾಯ ಆಚಾರ್ಯ ಎಂಬವರ ಕೃಷಿಗೆ ಹಾಕಿರುವ, ಪೈಪ್ ಲೈನ್ ನಾಶ ಮಾಡಿದ್ದು ಹತ್ತಿರದಲ್ಲೇ ಇದ್ದ ಹಲಸಿನ ಮರದ ಗೆಲ್ಲುಗಳನ್ನು ತುಂಡರಿಸಿದೆ.
ಆಗುಂಬೆ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯದಲ್ಲಿ ಹದಿನೈದು ದಿನಗಳಿಂದ ಕೇವಲ ಹಲಸಿನ ಮರದ ಎಲೆಗಳು, ಹಲಸು ತಿಂದು ಸಾಗುತ್ತಿದೆ. ಇಲ್ಲದಿದ್ದರೆ ನೆಟ್ಟ ಅಡಕೆ ಮರವನ್ನು ಸೀಳಿ ತಿರುಳನ್ನು ತಿನ್ನುತ್ತಿವೆ. ಸೋಮೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಬೈನೆ ಮರಗಳು ತೀರಾ ಕಡಿಮೆ ಇದ್ದು ಹಲಸು ಹಾಗೂ ಅಡಕೆ ಮರವನ್ನು ತಿನ್ನುತ್ತವೆ.
ರಾತ್ರಿ ವೇಳೆಯಲ್ಲಿ ನೆಲ್ಲಿಕಟ್ಟೆ ಕೆದ್ದಲಮಕ್ಕಿ ಉಷಾ ಶೆಟ್ಟಿಯ ಹಲಸಿನ ಮರದ ಗೆಲ್ಲು ತುಂಡರಿಸುವ ವೇಳೆ ಶಬ್ದ ಬಂದ ವೇಳೆಯಲ್ಲಿ ಲೈಟ್ ಹಾಕಿದಾಗ ಆನೆ ಓಟಕ್ಕಿತ್ತಿದೆ.
ಹದಿನೈದು ದಿನಗಳ ಹಿಂದೆ ಮೀನಾ ಪೂಜಾರ್ತಿ ಎಂಬವರ ಮನೆ ಬಳಿ ಆನೆ ರಾತ್ರಿ ದಾಳಿ ಮಾಡಿದ್ದು ಮರದಲ್ಲಿದ್ದ ಹಲಸು ಹಾಗೂ ತೆಂಗು, ಬಾಳೆ, ನಾಶ ಮಾಡಿದೆ.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ಮೂವತ್ತು ವರ್ಷಗಳಿಂದ ಈ ಒಂಟಿ ಸಲಗ ಸುಳ್ಯದ ಕುಕ್ಕೆ ಸುಬ್ರಮಣ್ಯದಿಂದ ಬೆಳ್ತಂಗಡಿ ಮೂಲಕ ನಾರಾವಿ, ಮಾಳಘಾಟ್, ವಾಲಿಕುಂಜ ಬೆಟ್ಟದ ಮೇಲಿನ ಕಬ್ಬಿನಾಲೆಯ ತಿಂಗಳ ಮಕ್ಕಿ, ತೆಂಗುಮಾರ್, ಕಿಗ್ಗ, ಬರ್ಕಣ, ಆಗುಂಬೆ ಮೂಲಕ ನಗರ, ಹೊಸನಗರದವರೆಗೂ ಸಂಚರಿಸುತ್ತದೆ. ಆದರೆ ಯಾವುದೇ ಪ್ರಾಣ ಹಾನಿ ಮಾಡಿಲ್ಲ ಎಂದು ಇಲಾಖೆ ತಿಳಿಸಿದೆ.