ಬೆಳಗಾವಿ : ಚಿಕ್ಕಬಾಗೇವಾಡಿ ಬಳಿ ಹೆದ್ದಾರಿಯಲ್ಲಿ ಗುರುವಾರ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ, ಮೂರು ಕರುಗಳು ಮೃತಪಟ್ಟಿವೆ.

ಮಹಾರಾಷ್ಟ್ರ ನೋಂದಣಿ ಹೊಂದಿದ ಕ್ಯಾಂಟರ್‌ನಲ್ಲಿ 12 ಗೋವುಗಳನ್ನು ತುಂಬಿಕೊಂಡು ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ 3 ಕರುಗಳು ಮೃತಪಟ್ಟಿದ್ದು, ಎರಡು ಹಸುಗಳ ಸ್ಥಿತಿ ಗಂಭೀರವಾಗಿವೆ. ಏಳು ಹಸುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕ್ಯಾಂಟರ್‌ನಲ್ಲಿ ಸಿಲುಕಿದ್ದ ಹಸುಗಳನ್ನು ಹೊರ ತೆಗೆದರು. ಉಳಿದ 9 ಗೋವುಗಳನ್ನು ವಶಕ್ಕೆ ಪಡೆದು ಇಂಚಲದ ಗೋಶಾಲೆಗೆ ಸಾಗಿಸಿದರು.

ಶ್ರೀರಾಮಸೇನೆ ಹಿಂದೂಸ್ತಾನ ಮುಖ್ಯಸ್ಥ ರಮಾಕಾಂತ ಕೊಂಡುಸ್ಕರ್ ಭೇಟಿ ನೀಡಿದರು.

ಸ್ಥಳಕ್ಕೆ ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್‌ಐ ಗುರುರಾಜ ಕಲಬುರ್ಗಿ, ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ನಡೆಸಿದರು.

ಹಿಂದೂಪರ ಸಂಘಟನೆ ಪ್ರಮುಖ ಕುಮಾರ ಗಣಾಚಾರಿ, ಈರಯ್ಯಾ ಚಿಕ್ಕಮಠ, ಶಿವಾನಂದ ಕಲ್ಲೂರ, ಅಭಿಷೇಕ ಬೆನಕಟ್ಟಿ, ನಾಗಪ್ಪ ಸಂಗೊಳ್ಳಿ, ಶಿವು ತಿಗಡಿ, ಮಂಜುನಾಥ ಕರಿಗಾರ ನೇತೃತ್ವದಲ್ಲಿ ಹಲವಾರು ಯುವಕರು ಗೋ ಸೇವೆ ಮಾಡಿದರು. ಮೃತ ಗೋವುಗಳ ಪೂಜೆ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದರು.