ಗೋಕಾಕ:
ಆಡಳಿತ ಹಾಗೂ ಅಭಿವೃದ್ದಿ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಆಗ್ರಹಿಸಿ ನಗರದಲ್ಲಿಂದು ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯು ಜರುಗಿತು.
ಬುಧವಾರದಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನೆಯು ಅಪ್ಸರಾ ಕೂಟ, ತಂಬಾಕು ಕೂಟ, ಬಾಫನಾ ಚೌಕ, ಅಜಂತಾ ಕೂಟ, ಆನಂದ ಚಿತ್ರಮಂದಿರ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಗೋಕಾಕನ್ನು ಕೂಡಲೇ ಜಿಲ್ಲಾ ಕೇಂದ್ರವನ್ನಾಗಿ ರಚಿಸಬೇಕು. ಈ ಹಿಂದಿನ ಮೂರು ಆಯೋಗಗಳು ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡುವಂತೆ ಆಗಿನ ಸರಕಾರಗಳಿಗೆ ತಮ್ಮ ವರದಿಗಳನ್ನು ಸಲ್ಲಿಸಿವೆ. ಕಳೆದ 40 ವರ್ಷಗಳಿಂದ ಈ ಭಾಗದ ನಾಗರೀಕರು ಗೋಕಾಕ ಜಿಲ್ಲೆಗಾಗಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಗೋಕಾಕ ಜಿಲ್ಲಾ ರಚನೆಯು ಕೇವಲ ಕನಸಾಗಿಯೇ ಉಳಿದಿದೆ. ಆಡಳಿತಾತ್ಮಕ ದೃಷ್ಠಿಯಿಂದ ಭೌಗೋಳಿಕವಾಗಿ ದೊಡ್ಡದಿರುವ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಗೋಕಾಕನ್ನು ಹೊಸ ಜಿಲ್ಲೆಯನ್ನಾಗಿ ರಚಿಸಬೇಕು ಎಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಗೋಕಾಕ ಜಿಲ್ಲಾ ರಚನೆಗೆ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರು ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಜಾರಕಿಹೊಳಿ ಸಹೋದರರಿಗೆ ಇಡೀ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನಾಗರೀಕರು ಶಕ್ತಿಯಾಗಿ ನಿಂತಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿ ಗೋಕಾಕ ಜಿಲ್ಲೆಯ ಕನಸನ್ನು ನನಸು ಮಾಡಲು ಕಾರಣಿಕರ್ತರಾಗಬೇಕೆಂದು ಪ್ರತಿಭಟನಾಕಾರರು ಜಾರಕಿಹೊಳಿ ಸಹೋದರರಲ್ಲಿ ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಅರಭಾವಿಮಠದ ಗುರುಬಸವಲಿಂಗ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಮನ್ನಿಕೇರಿಯ ಮಹಾಂತಸಿದ್ದೇಶ್ವರ ಮಹಾಸ್ವಾಮಿಗಳು, ಕಳ್ಳಿಗುದ್ದಿ-ಕಪರಟ್ಟಿ ಬಸವರಾಜ ಸ್ವಾಮಿ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಮುಖಂಡ ಅಶೋಕ ಪೂಜಾರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ಹಿರಿಯ ನ್ಯಾಯವಾದಿ ಬಿ.ಆರ್.ಕೊಪ್ಪ, ಮುಖಂಡರಾದ ಸಿದ್ದಲಿಂಗ ದಳವಾಯಿ, ರಾಜೇಂದ್ರ ಸಣ್ಣಕ್ಕಿ, ಅಶೋಕ ಪಾಟೀಲ, ಎಂ.ಆರ್.ಭೋವಿ, ಮಡ್ಡೇಪ್ಪ ತೋಳಿನವರ,ಟಿ.ಆರ್.ಕಾಗಲ, ಎಸ್.ವಿ.ದೇಮಶೆಟ್ಟಿ, ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಸದಾಶಿವ ಗುದಗಗೋಳ, ಮಹಾದೇವ ಶೆಕ್ಕಿ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಎ.ಟಿ.ಗಿರಡ್ಡಿ, ಸತ್ತೇಪ್ಪ ಕರವಾಡೆ, ರಮೇಶ ಮಾದರ, ಕುತುಬುದ್ದೀನ ಗೋಕಾಕ, ಭೀಮಶಿ ಭರಮನ್ನವರ, ಮಹಾಂತೇಶ ಕಡಾಡಿ, ಲಖನ್ ಸಂಸೌದ್ದಿ, ದಸ್ತಗೀರ ಪೈಲವಾನ, ಗೋಕಾಕ-ಮೂಡಲಗಿ ತಾಲೂಕಿನ ಎಲ್ಲ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನ್ಯಾಯವಾದಿಗಳು ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.
ಗೋಕಾಕ ಜಿಲ್ಲೆಯಾಗಬೇಕೆಂಬುದು ಕಳೆದ 4 ದಶಕಗಳ ಕೂಗು. ಇದಕ್ಕಾಗಿ ಹಲವು ಮಹನೀಯರು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು. ಇಲ್ಲಿಯತನಕ ನಾವು ಶಾಂತ ರೀತಿಯಿಂದ ಹೋರಾಟಗಳನ್ನು ಮಾಡಿಕೊಂಡು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ. ನಮ್ಮ ಗೋಕಾಕ ಜಿಲ್ಲಾ ರಚನೆಗೆ ಜಾರಕಿಹೊಳಿ ಸಹೋದರರು ಎಲ್ಲ ರೀತಿಯಿಂದಲೂ ಸಹಕಾರ-ಬೆಂಬಲ ನೀಡುತ್ತಾ ನಮ್ಮ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಜಿಲ್ಲಾ ಹೋರಾಟ ಸಮಿತಿಯಿಂದ ಜಾರಕಿಹೊಳಿ ಸಹೋದರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಇನ್ನಾದರೂ ಈ ಅಧಿವೇಶನದಲ್ಲಿಯೇ ಗೋಕಾಕ ಜಿಲ್ಲೆಯನ್ನಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಿಸಬೇಕು.
-ಮುರುಘರಾಜೇಂದ್ರ ಮಹಾಸ್ವಾಮಿಗಳು, ಶೂನ್ಯ ಸಂಪಾದನಾಮಠ ಗೋಕಾಕ
ಗೋಕಾಕ ಜಿಲ್ಲಾ ರಚನೆಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲವಿದೆ. ಕಳೆದ ಹಲವಾರು ವರ್ಷಗಳಿಂದ ಗೋಕಾಕ ಜಿಲ್ಲೆಗಾಗಿ ಸತತ ಹೋರಾಟಗಳು ನಡೆಯುತ್ತಲೇ ಇವೆ. ಅಭಿವೃದ್ಧಿ ಮತ್ತು ಆಡಳಿತದ ದೃಷ್ಠಿಯಿಂದ ಗೋಕಾಕ ಜಿಲ್ಲೆ ಆಗಲೇ ಬೇಕು. ಇದಕ್ಕಾಗಿ ಎಂತಹ ಹೋರಾಟಗಳಿಗೂ ನಾವು ಸಿದ್ಧರಿದ್ದೇವೆ.
-ಸರ್ವೋತ್ತಮ ಜಾರಕಿಹೊಳಿ ಯುವ ಧುರೀಣರು ಗೋಕಾಕ
ಜೆ.ಎಚ್.ಪಟೇಲ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡಿ ಅಧಿಸೂಚನೆಯನ್ನು ಹೊರಡಿಸಿದ್ದರು. ಆದರೆ ಕಾರಣಾಂತರಗಳಿಂದ ಗೋಕಾಕ ಜಿಲ್ಲೆಯನ್ನು ತಡೆ ಹಿಡಿದು ನಮಗೆ ಅನ್ಯಾಯ ಮಾಡಲಾಯಿತು. ಜಾರಕಿಹೊಳಿ ಸಹೋದರರು ಮನಸ್ಸು ಮಾಡಿದರೇ ಗೋಕಾಕ ಜಿಲ್ಲೆ ಮಾಡುವುದು ದೊಡ್ಡ ಕೆಲಸವೇನಲ್ಲಾ. ಸಚಿವ ಸತೀಶ ಜಾರಕಿಹೊಳಿ ಮತ್ತು ಸಹೋದರರಿಗೆ ನಾವೆಲ್ಲಾ ಕೂಡಿಕೊಂಡು ಶಕ್ತಿ ನೀಡೋಣ. -ಅಶೋಕ ಪೂಜಾರಿ ಮುಖಂಡರು