ಮೂಡಲಗಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಬಡಜನರಿಗೆ, ರೈತರಿಗೆ ಮಹಿಳೆಯರಿಗೆ, ಯುವಕರಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಆದರೆ, ಜನಸಾಮಾನ್ಯರಿಗೆ ಅನುಕೂಲವಾಗಬೇಕಾದ ಅನೇಕ ಯೋಜನೆಗಳ ಬಗ್ಗೆ ಅದೆಷ್ಟೋ ಜನರಿಗೆ ಮಾಹಿತಿಯೇ ಇಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪಂಚಾಯತ್ ಕೇಂದ್ರಗಳಲ್ಲಿ ಜನಜಾಗೃತಿ ಮಾಡಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ರವಿವಾರ ಡಿ-24 ರಂದು ಅರಭಾವಿ ಮತಕ್ಷೇತ್ರದ ಪಟಗುಂದಿ ಮತ್ತು ಹುಣಶ್ಯಾಳ ಪಿ.ವೈ.ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದು 9 ವರ್ಷ ಕಳೆದಿದೆ. ಜನ ಸಾಮಾನ್ಯರು, ಸೇರಿದಂತೆ ಅನೇಕ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಪ್ರಧಾನಿ ಮೋದಿ ಅವರು ಅನೇಕ ಯೋಜನೆಗಳನ್ನ ಜಾರಿ ಮಾಡಿದ್ದಾರೆ ಎಂದರು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಕಿಸಾನ್ ಮಾನ್ ಧನ್ ಯೋಜನೆ, ಪಿಎಂ ಫಸಲ್ ಬಿಮಾ ಯೋಜನೆ, ಪಿಎಂ ಕೃಷಿ ಸಿಂಚಾಯಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ರಸಗೊಬ್ಬರ ಸಬ್ಸಿಡಿ, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಪಿಎಂ ಉಜ್ವಲಾ ಯೋಜನೆ, ಆಯುಷ್‌ಮಾನ್ ಕಾರ್ಡ್ ವಿತರಣೆ, ಜಲ್ ಜೀವನ್ ಮಿಷನ್, ಪಿಎಂ ಮುದ್ರಾ ಯೋಜನೆ, ಪಿಎಂ ಜೀವನ್ ಜ್ಯೋತಿ, ಪಿಎಂ ಸುರಕ್ಷ ಭೀಮಾ ಯೋಜನೆ, ಆಟಲ್ ಪಿಂಚಣಿ ಯೋಜನೆ, ಸ್ವಸಹಯ ಗುಂಪುಗಳಿಗೆ ಸಾಲ ಯೋಜನೆ, ಪಿಎಂ ವಿದ್ಯಾರ್ಥಿ ವೇತನ, ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆಗಳ ಬಗ್ಗೆ ಅದೇಷ್ಟೋ ಜನಸಾಮಾನ್ಯರಿಗೆ ಮಾಹಿತಿ ಇಲ್ಲ. ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರದ ಯೋಜನೆಗಳು, ಅದರ ಬಗ್ಗೆ ಮಾಹಿತಿ ತಿಳಿಸಿಕೊಡುವುದು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳನ್ನು ಸಂಘಟಿಸುವುದು, ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಇದರ ಸೌಲಭ್ಯಗಳು ಸಿಗುವಂತೆ ಮಾಡುವ ಈ ಕಾರ್ಯಕ್ರಮವು ಯಶಸ್ವಿಗೊಳಿಸಬೇಕಾಗಿದೆ. ಅಧಿಕಾರಿಗಳು ಈ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಅರಿವು ಮೂಡಿಸುವಂತಾಗಬೇಕೆಂದು ಮನವಿ ಮಾಡಿದರು.
ಪಟಗುಂದಿ ಗ್ರಾ.ಪಂ ಅಧ್ಯಕ್ಷೆ ಜಾಯನಾ ಪೀರಜಾದೆ, ಉಪಾಧ್ಯಕ್ಷ ಶಿವ ನಾಯಕ, ಸದಸ್ಯರಾದ ಶ್ರೀ ಬಸಗೌಡ ಪಾಟೀಲ, ಶ್ರೀ ರಾವಸಾಬ ಪಾಟೀಲ, ಬಿಜೆಪಿ ಮುಖಂಡರಾದ ಶ್ರೀ ಪ್ರಕಾಶ ಮಾದರ, ಡಾ. ಬಿ.ಎಂ. ಪಾಲಭಾಂವಿ, ಶ್ರೀ ಮಹಾಲಿಂಗ ಒಂಟಗೂಡೆ, ಹುಣಶ್ಯಾಳ ಪಿ.ವೈ.ಗ್ರಾಮದ ರಾಮಚಂದ್ರ ಉಪ್ಪಿನ, ಡಾ. ವಿ.ಎಚ್. ಪಾಟೀಲ, ಗೋಪಾಲ ಬಿಳ್ಳೂರ, ಹಣಮಂತ ಬಿಳ್ಳೂರ, ಬಸವರಾಜ ನಿಡಗುಂದಿ, ಹೊಳೆಬಸಪ್ಪ ಕುಂಬಾರ, ಚನ್ನಪ್ಪ ಚೌಗಲಾ, ಹಣಮಂತ ರಡರಟ್ಟಿ, ಮಾರುತಿ ಮೇತ್ರಿ, ಮಲ್ಲಪ್ಪ ನಾಯ್ಕ, ಜಗದೀಶ ಡೊಳ್ಳಿ, ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ ದೇಶಪಾಂಡೆ, ಹರೀಶ ಗಡಿನಾಯಕ, ಡಾ. ನಿತೀನ್, ಡಾ. ನರೇಶ ಕಂಕಣವಾಡಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಂಗಾಧರ ಮಲ್ಹಾರಿ, ಉದಯಕುಮಾರ, ಕೃಷಿ ಇಲಾಖೆಯ ಎಂ ಎನ್ ಮಲಾವಡಿ, ಗ್ಯಾಸ್‌ ವಿತರಕ ಶಿವಕುಮಾರ ಹೆಗ್ಗನ್ನವರ, ಪಿ.ಎಸ್.ಐ. ಶ್ರೀ ಹಾಲಪ್ಪ ಬಾಲದಂಡಿ ಸೇರಿದಂತೆ ರೈತರು, ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.