ಮೂಡಲಗಿ:
ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ದೇಶದ ಆರ್ಥಿಕತೆ, ಮೂಲಸೌಕರ್ಯ, ಸಾಮಾಜಿಕ ಕಲ್ಯಾಣ ಮತ್ತು ರಕ್ಷಣೆಯನ್ನು ಬಲಪಡಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ಪ್ರತಿ ಗ್ರಾಮಗಳಿಗೂ ಮೋದಿ ಗ್ಯಾರಂಟಿ ವಾಹನದ ಮೂಲಕ ಯೋಜನೆಗಳ ಅನುಕೂಲತೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬುಧವಾರ ಜ-03 ರಂದು ವಡೇರಹಟ್ಟಿ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಿ ಅವರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ಬಂದಿರುವುದನ್ನು ತಿಳಿಸುವುದರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವ ಜನರಿಗೆ ಯೋಜನೆಗಳ ಸಮರ್ಪಕ ಮಾಹಿತಿ ನೀಡುವ ಉದ್ದೇಶದಿಂದ ಇಡಿ ದೇಶದಲ್ಲಿ ಈ ಒಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಲಾಗಿದೆ ಎಂದ ಅವರು ಯೋಜನೆಗಳ ಲಾಭವನ್ನು ಪಡೆದು ತಮ್ಮ ಸ್ವಂತ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ದೇಶದ 12 ಕೋಟಿ ರೈತರಿಗೆ ಕಿಸಾನ್ ಸಮ್ಮಾನ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ದೇಶದ 10 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ ಸಿಲಿಂಡರ್ ವಿತರಿಸಲಾಗಿದೆ, 12ಕೋಟಿ ಬಡವರ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ, 55 ಕೋಟಿ ಜನರಿಗೆ ಆಯುಷ್ಮಾನ ಭಾರತ ಯೋಜನೆಯಡಿ ರೂ.5ಲಕ್ಷದವರೆಗೆ ಉಚಿತ ಚಿಕಿತ್ಸೆ, ದೇಶದ 81 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗಿದೆ. ಮುಂದಿನ 5 ವರ್ಷಗಳವರೆಗೂ ಉಚಿತ ಪಡಿತರ ನೀಡಲಿದ್ದೇವೆ.
ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ರೂ.5000 ನೀಡುತ್ತಿರುವುದು ಮೋದಿ ಸರ್ಕಾರ ಎಂದು ತಿಳಿಸಿದ ಅವರು ಕಿಸಾನ್ ಮಾನ್ ಧನ್ ಯೋಜನೆ, ಫಸಲ್ ಬಿಮಾ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ರಸಗೊಬ್ಬರ ಸಬ್ಸಿಡಿ, ಗರೀಬ್ ಕಲ್ಯಾಣ್ ಅನ್ನ ಯೋಜನೆ, ಉಜ್ವಲಾ ಯೋಜನೆ, ಆಯುಷ್‌ಮಾನ್ ಕಾರ್ಡ್ ವಿತರಣೆ, ಜಲ್ ಜೀವನ್ ಮಿಷನ್, ವಿಶ್ವಕರ್ಮ ಯೋಜನೆ, ಪಿಎಂ ಮುದ್ರಾ ಯೋಜನೆ, ಪಿಎಂ ಜೀವನ್ ಜ್ಯೋತಿ, ಪಿಎಂ ಸುರಕ್ಷ ಭೀಮಾ ಯೋಜನೆ ಇನ್ನಿತರ ಯೋಜನೆಗಳು ಜಾರಿಯಲ್ಲಿದ್ದು ಜನರು ಇವೆಲ್ಲ ಯೋಜನೆಗಳ ಲಾಭವನ್ನು ಸ್ಥಳದಲ್ಲೇ ಮಾಹಿತಿ ಪಡೆದು ಅರ್ಜಿಯನ್ನು ಸಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಜಿ.ಪಂ ಸದಸ್ಯ ಮಾರುತಿ ತೋಳಮರಡಿ, ಗ್ರಾ.ಪಂ ಅಧ್ಯಕ್ಷೆ ಅಕ್ಕವ್ವ ಹಾಲಪ್ಪ ಮಳಿವಡೇರ, ಗ್ರಾ.ಪಂ ಸರ್ವ ಸದಸ್ಯರು, ರೆಬೊಜಿ ಮಳಿವಡೇರ, ಅಡಿವೆಪ್ಪ ಹಾದಿಮನಿ, ಗೋಪಾಲ ತೋಳಮರಡಿ, ಭಗವಂತ ಧರ್ಮಟ್ಟಿ, ಹಾಲಪ್ಪ ಮಳಿವಡೇರ, ಗೋಕಾಕ ಕೆನರಾ ಬ್ಯಾಂಕ ಮ್ಯಾನೇಜರ ಮಲ್ಲನಗೌಡ ನ್ಯಾಮಣ್ಣವರ್ , ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಾನಂದ ಗುಡಸಿ, ಇಲಾಖೆಯ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.