| Latest Version 9.0.7 |

Local News

ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸಿ:  ಕೇಂದ್ರ ಸಚಿವರೊಂದಿಗೆ ಸಂಸದ ಶೆಟ್ಟರ ಚರ್ಚೆ

ಬೆಳಗಾವಿ ವಿ

 

ಬೆಳಗಾವಿ : ಬೆಂಗಳೂರು – ಬೆಳಗಾವಿ – ಬೆಂಗಳೂರು ಹಾಗೂ ನವದೆಹಲಿ – ಬೆಳಗಾವಿ – ನವದೆಹಲಿ ನಡುವೆ ವಿಮಾನಯಾನ ಸೇವೆ ಒದಗಿಸುತ್ತಿರುವ ಇಂಡಿಗೋ ಸಂಸ್ಥೆ ಸಪ್ತಾಹದಲ್ಲಿ ಕೇವಲ ಆಯ್ದ ದಿನಗಳಲ್ಲಿ ಮಾತ್ರ ಸೇವೆಯನ್ನು ಒದಗಿಸುತ್ತಿದ್ದು, ಇದನ್ನು ಮಾರ್ಪಡಿಸಿ ಈ ಮೊದಲಿನಂತೆಯೇ ದಿನನಿತ್ಯದ ಸೇವೆಯನ್ನು ಒದಗಿಸುವ ಕುರಿತಾಗಿ ಪ್ರಸ್ತಾಪಿಸಿ ಸಂಸದ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಶುಕ್ರವಾರ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರನ್ನು ನವ ದೆಹಲಿಯ ನೂತನ ಸಂಸತ್ ಭವನದ ಅವರ ಕೊಠಡಿಯಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿದರು.

 

ಇಂಡಿಗೋ ಸಂಸ್ಥೆ ಜೂನ್ 16 ರಿಂದ ಬೆಂಗಳೂರು-ಬೆಳಗಾವಿ ನಡುವೆ ವಿಮಾನಯಾನ ಸೇವೆಯನ್ನು ಕೇವಲ ಸೋಮವಾರ, ಬುಧವಾರ, ಶುಕ್ರವಾರ ಮತ್ತು ರವಿವಾರಗಳಂದು ಬೆಳಗ್ಗೆ ಹಾಗೂ ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಸಂಜೆ ಮಾತ್ರ ಒದಗಿಸುತ್ತಿದೆ.

 

ಅದರಂತೆ ನವದೆಹಲಿ-ಬೆಳಗಾವಿ ನಡುವೆ ಕೇವಲ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರ ಸೇವೆ ಒದಗಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತುಂಬಾ ಅನಾನುಕೂಲತೆಯಾಗಿದೆ. ಪ್ರಯುಕ್ತ ಪ್ರಸ್ತಾಪಿತ ಮಾರ್ಗದಲ್ಲಿ ಈ ಮೊದಲಿನಂತೆ ದಿನ ನಿತ್ಯದ ಸೇವೆಯನ್ನು ಒದಗಿಸುವಂತೆ ಸೂಕ್ತ ಸೂಚನೆಯನ್ನು ಇಂಡಿಗೋ ಸಂಸ್ಥೆಗೆ ನೀಡುವಂತೆ ಸಂಸದರು ಕೇಂದ್ರ ಸಚಿವರಲ್ಲಿ ಕೋರಿದರು.

 

ಬೆಳಗಾವಿ ಬಹು ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ನಗರ. ಈ ಹಿನ್ನಲೆಯಲ್ಲಿ ಈಗಿರುವ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸುವ ಬಗ್ಗೆಯೂ ಸೇರಿದಂತೆ, ಬೆಳಗಾವಿಯಿಂದ ಚೆನ್ನೈ, ಪುಣೆ ಮತ್ತು ಅಹಮದಾಬಾದ್ ನಗರಗಳಿಗೂ ನೂತನ ವಿಮಾಣ ಸೇವೆ ಒದಗಿಸುವ ಕುರಿತು ಸಹ ಚರ್ಚಿಸಿ, ಮುಂದಿನ ತುರ್ತು ಕ್ರಮ ಜರುಗಿಸಲು ಅವರು ಕೋರಿದರು.

 

ಪ್ರಸ್ತಾಪಿತ ಎಲ್ಲ ಬೇಡಿಕೆಗಳನ್ನು ಅವಲೋಕಿಸಿದ ಕೇಂದ್ರ ಸಚಿವರು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ಶೀಘ್ರ ಕ್ರಮ ಕೈಕೊಳ್ಳುವ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

Team Udayaprabha
";