ಬೆಳಗಾವಿ : 2004 ರ ಎಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ಸುಪ್ರೀಮ್ ಕೋರ್ಟಿನಲ್ಲಿ ಗಡಿ ವಿವಾದ ಪ್ರಕರಣ ಸಂಬಂಧದ ದಾವೆಯೊಂದನ್ನು ದಾಖಲಿಸಿದೆ. ಕರ್ನಾಟಕದ ಬೆಳಗಾವಿ, ಕಾರವಾರ, ಬೀದರ ಹಾಗೂ ಕಲಬುರ್ಗಿ ಜಿಲ್ಲೆಗಳ ಬೆಳಗಾವಿ ಸಹಿತ 865 ಹಳ್ಳಿಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ದಾವೆಯಲ್ಲಿ ಕೋರಲಾಗಿದೆ. ಮಹಾರಾಷ್ಟ್ರದ ದಾವೆಯನ್ನು ವಿಚಾರಣೆಗೆ ಅಂಗೀಕರಿಸಬೇಕೋ ಬೇಡವೋ ఎంబ ಬಗ್ಗೆ ಇನ್ನೂ ನಿರ್ಧಾರವಾಗಬೇಕಾಗಿದೆ. 22 ವರ್ಷಗಳಾದರೂ ಈ ಬಗ್ಗೆ ಸುನಾವಣೆಯಾಗಿಲ್ಲ.
ಮಹಾರಾಷ್ಟ್ರದ ದಾವೆಯಲ್ಲಿ ಕೇಂದ್ರ ಸರಕಾರವು ಮೊದಲ ಪ್ರತಿವಾದಿಯಾಗಿದ್ದು ಕರ್ನಾಟಕ ಸರಕಾರ ಎರಡನೇ ಪ್ರತಿವಾದಿಯಾಗಿದೆ. 2004 ರಿಂದ ಇಲ್ಲಿಯವರೆಗೆ 23 ಬಾರಿ ವಿಚಾರಣೆಗೆ ಬಂದರೂ ಸುನಾವಣೆ ನಡೆದಿಲ್ಲ. ಪೀಠದಲ್ಲಿದ್ದ ಕರ್ನಾಟಕ ಮೂಲದ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ.
ಮಂಗಳವಾರ ಸೆಪ್ಟೆಂಬರ್ 1 ರಂದು ಮಹಾರಾಷ್ಟ್ರವು ನ್ಯಾಯಾಲಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದೆ. ಪ್ರಕರಣವನ್ನು ತ್ವರಿತ ವಿಚಾರಣೆಗೆ ಆಗ್ರಹಿಸಿದೆ. ನ್ಯಾಯಾಲಯವು ಈ ಅರ್ಜಿಯನ್ನು ಸ್ವೀಕರಿಸಿದೆ. ಆದರೆ ವಿಚಾರಣೆ ಪಟ್ಟಿಯಲ್ಲಿ ಕೂಡಲೇ ಸೇರಿಸಲು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ತ್ರಿಸದಸ್ಯ ಪೀಠವು ನಿರಾಕರಿಸಿದ್ದು ಮಾಧ್ಯಮದಲ್ಲಿ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಹಾರಾಷ್ಟ್ರದ ದಾವೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಮಹಾರಾಷ್ಟ್ರದಲ್ಲಿ ಗಡಿ ವಿವಾದ ಪ್ರಕರಣದ ಸಂಬಂಧ ಒಂದು ವಿಶೇಷ ವಿಭಾಗವನ್ನು ಸ್ಥಾಪಿಸಲಾಗಿದೆ. ಮಹಾರಾಷ್ಟ್ರದ ದಾವೆಯು ಪ್ರಾಥಮಿಕ ಹಂತದಲ್ಲಿಯೇ ತಿರಸ್ಕಾರವಾಗುವಂತೆ ರಾಜ್ಯ ಸರಕಾರ ನೋಡಿಕೊಳ್ಳಬೇಕಾಗಿದೆ. ಕಳೆದ ಜುಲೈ 9 ರಂದು ಮುಖ್ಯಮಂತ್ರಿಗಳು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾವು ಮನವಿಯೊಂದನ್ನು ಸಲ್ಲಿಸಿದಾಗ ಶೀಘ್ರವೇ ಬೆಂಗಳೂರಿನಲ್ಲಿ ಸಭೆಯೊಂದನ್ನು ಕರೆಯುವುದಾಗಿ ತಾವು ಭರವಸೆ ನೀಡಿದ್ದೀರಿ.
ಗಡಿ ವಿವಾದ ಸಂಬಂಧ, ಈ ಹಿಂದೆ ಗಡಿ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ ಹಾಗೂ ಗಡಿ ವಿವಾದದ ಬಗ್ಗೆ ಅಪಾರವಾದ ಕಾಳಜಿ ಹಾಗೂ ಆಸಕ್ತಿ ಹೊಂದಿರುವ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಭೆಯನ್ನು ಕರೆಯಬೇಕೆಂದು ಕೋರುತ್ತೇವೆ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ತಿಳಿಸಿದ್ದಾರೆ.
Udaya Prabha > State News > ಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ
ಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ
Team Udayaprabha02/09/2026
posted on


,


















