ಬೀಡ್:
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಒಂದು ಹೆಣ್ಣು ಮಗುವಿನ ಜನನವು ಇಡೀ ಕುಟುಂಬಕ್ಕೆ ಐತಿಹಾಸಿಕ ಸಂಭ್ರಮದ ಕ್ಷಣವಾಗಿ ಪರಿಣಮಿಸಿದೆ. ಸುಮಾರು 200 ವರ್ಷಗಳ ಬಳಿಕ ಹಾಗೂ ನಾಲ್ಕು ತಲೆಮಾರುಗಳ ನಂತರ ದಹಿಫಾಲೆ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿರುವ ಹಿನ್ನೆಲೆಯಲ್ಲಿ, ನವಜಾತ ಶಿಶುವನ್ನು ರಥದಲ್ಲಿ ಕೂಡ್ರಿಸಿಕೊಂಡುಅದ್ಧೂರಿ ಮೆರವಣಿ ಮೂಲಕ ಮನೆಗೆ ಸ್ವಾಗತಿಸಲಾಯಿತು.
ಆಸ್ಪತ್ರೆಯಿಂದ ಬಿಡುಗಡೆಯಾದ ತಾಯಿ ಮತ್ತು ಮಗು ಗಾರ್ಗಿಯನ್ನು ಕುಟುಂಬದ ಸದಸ್ಯರು ಹಾಗೂ ಬಂಧುಬಳಗ ಭವ್ಯ ಮೆರವಣಿಗೆಯೊಂದಿಗೆ ಮನೆಗೆ ಕರೆತಂದರು. ಈ ವಿಶೇಷ ಸಂದರ್ಭವನ್ನು ಹಬ್ಬದ ಸಂಭ್ರಮದಂತೆ ಆಚರಿಸಿದ ಕುಟುಂಬವು, ಹೆಣ್ಣು ಮಗುವಿನ ಆಗಮನವನ್ನು ಸಂತೋಷ ಮತ್ತು ಹೆಮ್ಮೆಯಿಂದ ಸ್ವಾಗತಿಸಿತು. . ಸುಮಾರು 200 ವರ್ಷಗಳಿಂದ ಕುಟುಂಬದಲ್ಲಿ ಯಾವುದೇ ಹೆಣ್ಣು ಮಗು ಜನಿಸಿಲ್ಲ ಎಂದು ದಹಿಫಾಲೆ ಕುಟುಂಬ ತಿಳಿಸಿದೆ.ಮಗುವಿನ ಅಜ್ಜ ಲಿಂಬಾಜಿ ದಹಿಫಾಲೆ ಅವರು ಗಾರ್ಗಿ ಕುರಿತು ಮಾತನಾಡುವಾಗ ಭಾವುಕರಾದರು. “ಕುಟುಂಬದಲ್ಲಿ ಹೆಣ್ಣು ಮಗು ಇರುವುದು ದೊಡ್ಡ ಭಾಗ್ಯ. ಇಷ್ಟು ವರ್ಷಗಳ ಕಾಲ ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಇಲ್ಲದಿರುವ ಕೊರಗು ನಮ್ಮಲ್ಲಿತ್ತು. ಇಂದು ಆ ಕೊರಗು ನಿವಾರಣೆಯಾಗಿದೆ ” ಎಂದು ಅವರು ಹೇಳಿದರು.
ತಮ್ಮ ಇಬ್ಬರು ಸೊಸೆಯರನ್ನು ಸ್ವಂತ ಹೆಣ್ಣುಮಕ್ಕಳಂತೆ ನೋಡಿಕೊಂಡಿದ್ದೇನೆ ಎಂದು ಹೇಳಿದ ಲಿಂಬಾಜಿ, ಇದೀಗ ಮೊಮ್ಮಗಳು ಗಾರ್ಗಿಯನ್ನು ಡೋಲು-ತಾಳಗಳ ಸದ್ದು, ಸಂಗೀತ ಮತ್ತು ನೃತ್ಯದ ನಡುವೆ ರಥದಲ್ಲಿ ಕೂರಿಸಿಕೊಂಡು ಮನೆಗೆ ಕರೆತಂದಿರುವುದು ಅಪಾರ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಗುವಿನ ಅಜ್ಜಿ ಸುರೇಖಾ ದಹಿಫಾಲೆ ಮಾತನಾಡಿ, “ಇಂದು ನಮ್ಮ ಮನೆಗೆ ಲಕ್ಷ್ಮೀ ಬಂದಿದ್ದಾಳೆ. ನಮಗೆ ತುಂಬಾ ಸಂತೋಷವಾಗಿದೆ. ಆಸ್ಪತ್ರೆಯಿಂದಲೇ ಮಗುವಿಗೆ ವಿಶೇಷ ಸ್ವಾಗತ ನೀಡುವ ಯೋಜನೆ ರೂಪಿಸಿದ್ದೆವು” ಎಂದು ಹೇಳಿದರು.ಗಾರ್ಗಿಯ ತಂದೆಯೂ ತಮ್ಮ ಸಂತಸವನ್ನು ವ್ಯಕ್ತಪಡಿಸಿ, “ಸಮಾಜದಲ್ಲಿ ಕೆಲವೊಮ್ಮೆ ಗಂಡು ಮಕ್ಕಳಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಆದರೆ ಹೆಣ್ಣು ಮಕ್ಕಳೊಂದಿಗೆ ಇರುವ ಭಾವನಾತ್ಮಕ ಬಾಂಧವ್ಯವೇ ವಿಭಿನ್ನ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಅನಂತ ಇಂಗ್ಳೆ, ದಹಿಫಾಲೆ ಕುಟುಂಬದ ಈ ಆಚರಣೆಯನ್ನು ಶ್ಲಾಘಿಸಿದರು. “ಹೆಣ್ಣು ಮಗುವಿನ ಜನನವನ್ನು ಇಷ್ಟೊಂದು ಸಂತೋಷದಿಂದ ಆಚರಿಸಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಇನ್ನೂ ಕೆಲವೆಡೆ ಗಂಡು ಮಕ್ಕಳಿಗೆ ಆದ್ಯತೆ ನೀಡುವ ಮನೋಭಾವ ಇದೆ. ಅಂತಹ ಪರಿಸ್ಥಿತಿಯಲ್ಲಿ ಗಾರ್ಗಿಯ ಸ್ವಾಗತವು ಹೆಣ್ಣು ಮಕ್ಕಳ ಮೌಲ್ಯವನ್ನು ಎತ್ತಿಹಿಡಿಯುವ ಶಕ್ತಿಶಾಲಿ ಸಂದೇಶವಾಗಿದೆ” ಎಂದು ಹೇಳಿದ್ದಾರೆ. ಇಂತಹ ಆಚರಣೆಗಳು ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿರುವ ದೃಷ್ಟಿಕೋನವನ್ನು ಬದಲಾಯಿಸಲು ನೆರವಾಗುತ್ತವೆ ಎಂದರು.
Udaya Prabha > State News > 200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !
200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !
Team Udayaprabha02/09/2026
posted on


,


















