ಬೆಳಗಾವಿ:
ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 357 ಕೋಟಿ ರೂ. ವೆಚ್ಚದಲ್ಲಿ ಒಟ್ಟು 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ನೂತನ ಟರ್ಮಿನಲ್ 2026 ರೊಳಗೆ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಶನಿವಾರ ಬೆಳಗಾವಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಯೋಜನೆಯ ಕುರಿತು ವಿಮಾನ ನಿಲ್ದಾಣ ಸಲಹಾ ಸಮಿತಿಯ ಜೊತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಭೆ ನಡೆಸಿ, ಸಂಪೂರ್ಣ ಯೋಜನೆಯ ರೂಪರೇಷೆಗಳ ಬಗ್ಗೆ ಚರ್ಚಿಸಿದರು.

ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ನಾಲ್ಕು ಏರೋ ಬ್ರಿಡ್ಜ್, ಎಂಟು ಏಕ್ಸಲೇಟರ್, ಎಂಟು ಲಿಫ್ಟ್, ಏಕಕಾಲಕ್ಕೆ ಹೊರ ಹೊಗುವ ಮತ್ತು ಒಳಬರುವ 24೦೦ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಏಕಕಾಲಕ್ಕೆ 9 ವಿಮಾನಗಳ ನಿಲುಗಡೆ ವ್ಯವಸ್ಥೆ ಹೊಂದಿದ್ದು, ಟರ್ಮಿನಲ್ ಎದುರಿಗೆ 5೦೦ ಕಾರ್, 2೦೦ ಬೈಕ್, 10 ಬಸ್ ಹಾಗೂ ಇನ್ನಿತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕವಾದ ಸೌಲಭ್ಯಗಳ ಮೂಲಕ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.

ಈಗಾಗಲೇ ದೆಹಲಿ, ಮುಂಬೈ ಸೇರಿದಂತೆ ದೇಶದ ಅನೇಕ ನಗರಗಳಿಗೆ ಬೆಳಗಾವಿಯಿಂದ ನೇರ ಸಂಪರ್ಕ ವಿಮಾನಗಳು ಹಾರಾಡುತ್ತಿವೆ. ಇನ್ನೂ ಹೆಚ್ಚಿನ ವಿಮಾನ ಸೇವೆ ಸಿಗಲಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಉತ್ತಮ ಗುಣಮಟ್ಟದ ವಿಮಾನ ಸೇವೆ ನೀಡಲು ಸಹ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಂಸದೆ ಮಂಗಲಾ ಅಂಗಡಿ, ವಿಮಾನ ನಿಲ್ದಾಣ ನಿರ್ದೇಶಕ ಎಸ್. ತ್ಯಾಗರಾಜನ್, ಸಲಹಾ ಸಮಿತಿ ಸದಸ್ಯರಾದ ಭರತ ದೇಶಪಾಂಡೆ, ಸಂಜಯ ಭಂಡಾರಿ, ಐ.ಜಿ.ದೇಯಣ್ಣವರ, ಗುರುದೇವ ಪಾಟೀಲ, ಪ್ರಿಯಾಂಕಾ ಅಜ್ರೇಕರ್, ಅನುಪ್ ಕಾಟೆ ಸೇರಿದಂತೆ ಜಿಲ್ಲೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.