| Latest Version 9.0.7 |

Politics News

ತಮಿಳುನಾಡು ಚುನಾವಣೆ 2026 : ಎನ್‌ಡಿಎ-ಡಿಎಂಕೆ ನಡುವಿನ ಜಿದ್ದಾಜಿದ್ದಿಯಲ್ಲಿ ಗೆಲ್ಲೋದು ಯಾರು ; ‘ಮ್ಯಾಟ್ರಿಜ್’ ಸಮೀಕ್ಷೆ ಹೇಳಿದ್ದೇನು ?

 

 

ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕಣ ಸಜ್ಜಾಗುತ್ತಿದ್ದು, ಆಡಳಿತಾರೂಢ ಡಿಎಂಕೆ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಹಾಗೂ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂದು ‘ಮ್ಯಾಟ್ರಿಜ್’ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯು ಮುನ್ಸೂಚನೆ ನೀಡಿದೆ.

 

ಸೋಮವಾರ ಪ್ರಕಟವಾದ ಈ ಸಮೀಕ್ಷಾ ವರದಿಯು, ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಲ್ಪ ಮೇಲುಗೈ ಸಾಧಿಸಲಿದೆ ಎಂದು ಮುನ್ಸೂಚಿಸಿದೆ. ಒಟ್ಟು 234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 107 ರಿಂದ 120 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಸನಿಹಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.

 

ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು 102 ರಿಂದ 115 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇದೇ ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಇಳಿಯುತ್ತಿರುವ ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಶೇ. 16 ರಷ್ಟು ಮತಗಳೊಂದಿಗೆ 5 ರಿಂದ 12 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುವ ಸೂಚನೆ ನೀಡಿದೆ. ಇತರರು 1 ರಿಂದ 6 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದೆ.

ಮತ ಹಂಚಿಕೆಯಲ್ಲೂ ತೀವ್ರ ಪೈಪೋಟಿ ಕಂಡುಬಂದಿದ್ದು, ಎನ್‌ಡಿಎ ಶೇ. 40 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ. ಡಿಎಂಕೆ ಮೈತ್ರಿಕೂಟ ಶೇ. 38 ರಷ್ಟು ಮತಗಳನ್ನು ತನ್ನದಾಗಿಸಿಕೊಳ್ಳಬಹುದು ಎಂದು ಅಂದಾಜಿಸಿದೆ. ಟಿವಿಕೆ ಶೇ. 16 ರಷ್ಟು ಮತ ಪಡೆಯಬಹುದು, ಇತರರು ಶೇ. 6 ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದ ಅಂಕಿ ಅಂಶಗಳು ತಿಳಿಸಿವೆ.

 

ವಲಯವಾರು ಚಿತ್ರಣ

ದಕ್ಷಿಣ ತಮಿಳುನಾಡು: ಎನ್‌ಡಿಎ 24-26 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಡಿಎಂಕೆ ಮೈತ್ರಿಕೂಟ 22-24 ಸ್ಥಾನಗಳನ್ನು ಪಡೆಯಬಹುದು.

 

ಕಾವೇರಿ ಡೆಲ್ಟಾ: ಈ ಭಾಗದ 47 ಕ್ಷೇತ್ರಗಳಲ್ಲಿ ಎನ್‌ಡಿಎ 22-25 ಮತ್ತು ಡಿಎಂಕೆ+ 21-24 ಸ್ಥಾನಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.

 

ಚೆನ್ನೈ ವಲಯ: ಡಿಎಂಕೆ ಕೋಟೆಯಾದ ಚೆನ್ನೈನಲ್ಲಿ ಆಡಳಿತ ಪಕ್ಷವು 16-19 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯ ಮುಂದುವರಿಸುವ ನಿರೀಕ್ಷೆಯಿದೆ. ಇಲ್ಲಿ ಎನ್‌ಡಿಎ 12-15 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು.

 

ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸುವ ಫಲಿತಾಂಶವನ್ನು ಚುನಾವಣಾ ಆಯೋಗವು ಮೇ 4 ರಂದು ಪ್ರಕಟಿಸಲಿದೆ.

ಮೈತ್ರಿಕೂಟಗಳ ಸ್ವರೂಪ

ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಪಿಎಂಕೆ, ಎಎಂಎಂಕೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳಿದ್ದರೆ, ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ನಂತಹ ಪ್ರಮುಖ ಪಕ್ಷಗಳಿವೆ.

 

2021ರ ಚುನಾವಣೆಯಲ್ಲಿ ಡಿಎಂಕೆ 133 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಆದರೆ ಈ ಬಾರಿ ವಿರೋಧ ಪಕ್ಷಗಳ ಮೈತ್ರಿಕೂಟವು ಪ್ರಬಲ ಪೈಪೋಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Team Udayaprabha
";