ತೆಂಗಿನ ಚಿಪ್ಪು ಅಥವಾ ಕರಟದ ಬೆಲೆ ಕಿಲೋ ಒಂದಕ್ಕೆ 36 ₹ ಇದೆ ಎಂಬ ಪತ್ರಿಕಾ ವರದಿ ಓದಿದ ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಕೆಲವು ಭಾಗಗಳಲ್ಲಿ ಇದರ ಬೆಲೆ 45 ₹ ಇದೆ ಎಂಬ ಮಾಹಿತಿ ಸಹ ಇದೆ.
ಇಷ್ಟು ದಿನ ಬಚ್ಚಲು ಒಲೆಯ ಇಂಧನವಾಗಿ ಬೂದಿಯಾಗುತ್ತಿದ್ದ ಕರಟ ಏಕಿಷ್ಟು ಬೇಡಿಕೆ ಪಡೆಯಿತು?
ಅದರ ಹಿಂದಿರುವ ಕಾರಣಗಳನ್ನು ಹುಡುಕುತ್ತ ಹೋದರೆ ಕಲ್ಪವೃಕ್ಷದ ಉಪಯೋಗದ ಅಗಾಧತೆ ತಿಳಿಯುತ್ತದೆ.
ಸಾಮಾನ್ಯವಾಗಿ ತ್ಯಾಜ್ಯವೆಂದು ಭಾವಿಸಲಾಗುವ ತೆಂಗಿನ ಕರಟವು (ಚಿಪ್ಪು) ತನ್ನ ವಿಶಿಷ್ಟ ಭೌತಿಕ ಹಾಗೂ ರಾಸಾಯನಿಕ ಗುಣಲಕ್ಷಣಗಳಿಂದಾಗಿ ಅತ್ಯಂತ ಉಪಯುಕ್ತ ಮತ್ತು ನೈಸರ್ಗಿಕ ಕಚ್ಚಾವಸ್ತುವಾಗಿ ಬಳಸಲ್ಪಡುತ್ತದೆ.
ಕಚ್ಚಾ ತೈಲ ಮತ್ತು ಪೆಟ್ರೋಕೆಮಿಕಲ್ ಶುದ್ಧೀಕರಣದಿಂದ ಹಿಡಿದು, ಗೃಹಬಳಕೆಯ ಸೌಂದರ್ಯ ಉತ್ಪನ್ನಗಳವರೆಗೆ ತೆಂಗಿನ ಕರಟವು ವೈವಿಧ್ಯಮಯ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತೆಂಗಿನ ಕರಟವನ್ನು ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಿ ತಯಾರಿಸುವ ‘ಆಕ್ಟಿವೇಟೆಡ್ ಚಾರ್ಕೋಲ್’ (ಸಕ್ರಿಯ ಇದ್ದಿಲು) ಅತ್ಯಂತ ಸೂಕ್ಷ್ಮ ರಂಧ್ರಗಳ ರಚನೆ ಮತ್ತು ಹೆಚ್ಚಿನ ಗಡಸುತನವನ್ನು ಹೊಂದಿರುತ್ತದೆ. ಇದೇ ಗುಣದಿಂದಾಗಿ ಕಚ್ಚಾ ತೈಲ ಸಂಸ್ಕರಣಾಗಾರಗಳಲ್ಲಿ ಅನಿಲಗಳಿಂದ ಹಾನಿಕಾರಕ ಗಂಧಕ, ಪಾದರಸ, ಆವಿಶೀಲ ಸಾವಯವ ಸಂಯುಕ್ತಗಳನ್ನು (VOC) ಹಾಗೂ ತ್ಯಾಜ್ಯ ನೀರಿನಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೀರಿಕೊಳ್ಳಲು ಇದನ್ನು ಸಕ್ರಿಯವಾಗಿ ಬಳಸಲಾಗುತ್ತದೆ.
ರಿಫೈನರಿಗಳಲ್ಲಿ ಅನಿಲಗಳಿಂದ ಹೈಡ್ರೋಜನ್ ಸಲ್ಫೈಡ್ (H2S) ಮತ್ತು ಕಾರ್ಬನ್ ಡೈಆಕ್ಸೈಡ್ ತೆಗೆಯಲು ‘ಅಮೈನ್ ಸೊಲ್ಯೂಷನ್’ ಬಳಸಲಾಗುತ್ತದೆ. ಈ ದ್ರಾವಣದಲ್ಲಿ ಸೇರಿಕೊಳ್ಳುವ ತೈಲದ ಅಂಶ ಹಾಗೂ ರಾಸಾಯನಿಕ ಕಲ್ಮಶಗಳನ್ನು ತೆಗೆದುಹಾಕಿ, ಉಪಕರಣಗಳು ತುಕ್ಕು ಹಿಡಿಯುವುದನ್ನು ತಡೆಯಲು ತೆಂಗಿನ ಕರಟದ ಚಾರ್ಕೋಲ್ ಫಿಲ್ಟರ್‌ಗಳನ್ನು ಬಳಸಲಾಗುತ್ತದೆ.
ತೈಲ ಶುದ್ಧೀಕರಣದ ಹೊರತಾಗಿಯೂ, ತೆಂಗಿನ ಕರಟದ ಆಕ್ಟಿವೇಟೆಡ್ ಚಾರ್ಕೋಲ್‌ಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಾರುಕಟ್ಟೆಯಿದೆ. ಕುಡಿಯುವ ನೀರಿನ ಫಿಲ್ಟರ್‌ಗಳಲ್ಲಿ ರಾಸಾಯನಿಕ ಹಾಗೂ ದುರ್ವಾಸನೆ ತೆಗೆಯಲು, ಗ್ಯಾಸ್ ಮಾಸ್ಕ್ ಹಾಗೂ ಕಾರ್ಖಾನೆಗಳ ಚಿಮಣಿಗಳಲ್ಲಿ ಗಾಳಿ ಶುದ್ಧೀಕರಿಸಲು ಮತ್ತು ಗಣಿಗಾರಿಕೆ ಪ್ರಕ್ರಿಯೆಯಲ್ಲಿ ಸಯನೈಡ್ ದ್ರಾವಣದಿಂದ ಚಿನ್ನದ ಕಣಗಳನ್ನು ಬೇರ್ಪಡಿಸಲು ಇದು ಪ್ರಮುಖ ವಸ್ತುವಾಗಿದೆ.
ಕೃಷಿ ಕ್ಷೇತ್ರದಲ್ಲಿ ತೆಂಗಿನ ಕರಟದ ಇದ್ದಿಲನ್ನು ‘ಬಯೋಚಾರ್’ ರೂಪದಲ್ಲಿ ಮಣ್ಣಿಗೆ ಬೆರೆಸುವುದರಿಂದ ಮಣ್ಣಿನ ತೇವಾಂಶ ಮತ್ತು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಅಲ್ಲದೆ, ತೋಟಗಾರಿಕೆಯಲ್ಲಿ ತೇವಾಂಶ ಕಾಯ್ದುಕೊಳ್ಳಲು ಕರಟದ ಚೂರುಗಳನ್ನು ಮಲ್ಚಿಂಗ್‌ಗೆ ಬಳಸಲಾಗುತ್ತದೆ.
ಕೈಗಾರಿಕಾ ಕ್ಷೇತ್ರದಲ್ಲಿ ತೆಂಗಿನ ಕರಟವನ್ನು ನಯವಾಗಿ ಪುಡಿ ಮಾಡಿ (Shell Powder) ಪ್ಲೈವುಡ್, ಪ್ಲಾಸ್ಟಿಕ್, ಫೈಬರ್‌ಗ್ಲಾಸ್ ಹಾಗೂ ರಬ್ಬರ್ ಉತ್ಪನ್ನಗಳಲ್ಲಿ ಗಟ್ಟಿಮುಟ್ಟಾದ ಫಿಲ್ಲರ್ ಆಗಿ ಬಳಸಲಾಗುತ್ತದೆ. ಕರಟದ ಇದ್ದಿಲನ್ನು ಅಧಿಕ ಒತ್ತಡದಲ್ಲಿ ಸಂಸ್ಕರಿಸಿ ಹೊಗೆಯಿಲ್ಲದ, ದೀರ್ಘಕಾಲ ಉರಿಯುವ ‘ಇಟ್ಟಿಗೆ’ (Briquettes) ತಯಾರಿಸಲಾಗುತ್ತದೆ. ಇವುಗಳನ್ನು ಬಾರ್ಬೆಕ್ಯೂ ಮತ್ತು ತಂದೂರಿ ಅಡುಗೆಯಲ್ಲಿ ಪರಿಸರ ಸ್ನೇಹಿ ಇಂಧನವಾಗಿ ಬಳಸಲಾಗುತ್ತದೆ.
ಸೌಂದರ್ಯ ವರ್ಧಕ ಕ್ಷೇತ್ರದಲ್ಲಿ ಕಲ್ಮಶಗಳನ್ನು ಹೊರತೆಗೆಯುವ ಚಾರ್ಕೋಲ್ ಫೇಸ್ ಪ್ಯಾಕ್, ಟೂತ್‌ಪೇಸ್ಟ್ ಹಾಗೂ ಸಾಬೂನುಗಳ ತಯಾರಿಕೆಯಲ್ಲಿ ಇದರ ಬಳಕೆ ವ್ಯಾಪಕವಾಗಿದೆ. ಇಷ್ಟೇ ಅಲ್ಲದೆ, ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಬೌಲ್‌ಗಳು, ಕಪ್‌ಗಳು, ಚಮಚಗಳು, ಬಟನ್‌ಗಳು ಹಾಗೂ ಸುಂದರ ಕರಕುಶಲ ವಸ್ತುಗಳನ್ನು ತಯಾರಿಸಲು ತೆಂಗಿನ ಕರಟವನ್ನು ಬಳಸಲಾಗುತ್ತದೆ. ಹೀಗೆ ತೆಂಗಿನ ಕರಟವು ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಇಂಧನ ಹಾಗೂ ಜೈವಿಕ ಉದ್ಯಮಗಳಲ್ಲಿ ಅತ್ಯಂತ ಮೌಲ್ಯಯುತ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ.
ಹಾಗಾದರೆ ದಿಢೀರ್ ಎಂದು ಇದರ ಬೆಲೆ ಏರಲು ಬಳಕೆಯ ಹೆಚ್ಚಳ ಮಾತ್ರ ಕಾರಣವೆ ಎಂದು ನೋಡಿದರೆ ಅದು ಅಷ್ಟಕ್ಕೇ ಸೀಮಿತವಾಗಿಲ್ಲ.
ಇದು ಒಂದು ದೀರ್ಘಕಾಲದ ಬದಲಾವಣೆಯ ಪರಿಣಾಮ.
ತೆಂಗಿನಕಾಯಿ ಮತ್ತು ಕೊಬ್ಬರಿಯ ಬೆಲೆ ಕುಸಿದ ಕಾರಣದಿಂದ ರೈತರು ಕೊಬ್ಬರಿ ಮಾಡುವ ಬದಲು ಎಳನೀರನ್ನು ಹೆಚ್ಚಾಗಿ ಕೊಯ್ಯತೊಡಗಿದರು. ಇದರಿಂದ ಕೊಬ್ಬರಿ ಉತ್ಪಾದನೆ ಕುಂಟಿತವಾಗಿ ಚಿಪ್ಪಿನ ಲಭ್ಯತೆ ಸಹ ಕಡಿಮೆ ಆಯಿತು.
ಈಗ ಒಳ್ಳೆಯ ದರ ಬಂದಿದೆ. ತೆಂಗಿನಕಾಯಿ ಮತ್ತು ಚಿಪ್ಪು ಎರಡರ ದರವೂ (ಪ್ರತಿ ಕಿಲೋಕ್ಕೆ) ಬಹುತೇಕ ಒಂದೇ ಆಗಿದ್ದು ಸೋಜಿಗವೇ ಅಲ್ಲವೆ?


,
,


















