ಬೆಂಗಳೂರು : ಹೊಸ ಬೈಕ್ ಖರೀದಿಸಿದ ಬಳಿಕ ಬೈಕ್ ಕಂಪನಿ/ಡೀಲರ್‌ ಕಡೆಯಿಂದ ಗ್ರಾಹಕನಿಗೆ ನೀಡಲಾಗುವ ಉಚಿತ ಬೈಕ್ ಸರ್ವಿಸಿಂಗ್ ಸೌಲಭ್ಯವನ್ನು ನಿಗದಿತ ಅವಧಿಯಲ್ಲಿ ಪಡೆದುಕೊಳ್ಳದಿದ್ದರೆ ವಾರಂಟಿ ಕ್ಷೇಮ್ ಮಾಡಿಕೊಳ್ಳಲಾಗದು ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ವಾರಂಟಿ ಅವಧಿಯಲ್ಲಿರುವ ಕಾರಣ ಬೈಕ್‌ನ ದೋಷಪೂರಿತ ಸ್ಪೀಡೋಮೀಟರ್ ಬದಲಿಸಿಕೊಡುವಂತೆ ಬೈಕ್ ಡೀಲರ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿ ನಗರದ ಪ್ರವೀಣ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವೇದಿಕೆ ವಜಾಗೊಳಿಸಿದೆ.

ಖಾಸಗಿ ಉದ್ಯೋಗಿ ಪ್ರವೀಣ್ 2022ರ ಆಗಸ್ಟ್‌ನಲ್ಲಿ ಯಮಹಾ ಬೈಕ್ ಖರೀದಿಸಿದ್ದರು. ಆದರೆ, ಬೈಕ್‌ನ ಸ್ಪೀಡೋಮೀಟರ್ ನಲ್ಲಿ ದೋಷ ಕಾಣಿಸಿಕೊಂಡ ಕಾರಣ ಬದಲಿಸಿಕೊಡುವಂತೆ ಡೀಲರ್ ಕೋರಿದ್ದರು. ಆದರೆ, ಮನವಿಯನ್ನು ಡೀಲರ್ ತಿರಸ್ಕರಿಸಿದ ಕಾರಣ ಗ್ರಾಹಕರ
ವೇದಿಕೆಗೆ ದೂರು ಸಲ್ಲಿಸಿದ್ದರು.

ಪ್ರವೀಣ್ ದೂರಿನ ಜೊತೆಗೆ ವೇದಿಕೆಗೆ ಸಲ್ಲಿಸಿದ್ದ ವಾರಂಟಿ ಕಾರ್ಡ್‌ಲ್ಲೂ 3 ಮತ್ತು 4ನೇ ಉಚಿತ ಸರ್ವಿಸ್ ಕೂಪನ್‌ಗಳು ಬಳಕೆಯಾಗದೆ ಹಾಗೆಯೇ ಇದ್ದವು. ಕೇಬಲ್, ಎಲೆಕ್ನಿಕಲ್ ವೈರಿಂಗ್, ಎಲೆಕ್ಟಿಕಲ್ ಸಾಮಗ್ರಿಗಳು ವಾರಂಟಿ ವ್ಯಾಪ್ತಿಗೆ ಬರುವುದಿಲ್ಲವಾದ ಕಾರಣ ಅರ್ಜಿದಾರ ಪರಿಹಾರ ಕೋರಲು ಆಗದು ಎಂದು ಅಭಿಪ್ರಾಯಪಟ್ಟ ವೇದಿಕೆ, ಅರ್ಜಿ ವಜಾಗೊಳಿಸಿದೆ.