ಬೆಳಗಾವಿ: ಪ್ರೀತಿಸುತ್ತಿದ್ದ ಯುವತಿಯನ್ನು ಪತಿ ಮನೆಯಿಂದ ಮರಳಿ ಕರೆದುಕೊಂಡು ಬಂದ ಯುವಕ; ತಾನೂ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಪ್ರೀತಿಸಿದ ಯುವಕನ ಮನೆ ಮುಂದೆ ಏಕಾಂಗಿ ಆಗಿ ಧರಣಿ ನಡೆಸಿದ ಪ್ರಕರಣ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಗುರುವಾರ ನಡೆದಿದೆ.

ಇದರಿಂದ ಎರಡೂ ಕುಟುಂಬದವರ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ಯುವಕನ ಮನೆಯವರು ಬಾಗಿಲನ್ನು ಹಾಕಿಕೊಂಡರೆ, ಯುವಕ ಮಾತ್ರ ಎಲ್ಲೋ ಹೋಗಿದ್ದಾನೆ ಎಂದು ಕುಟುಂಬದವರು ತಿಳಿಸಿದರು.
ಇಲ್ಲಿಯ ಸೋಮವಾರ ಪೇಟೆಯ ಯುವಕ– ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವಂತೆ ಯುವತಿ ಮನೆಯವರು ಒಪ್ಪಿಗೆ ನೀಡಿದ್ದರು. ಆದರೆ, ಯುವಕನ ಮನೆಯವರು ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ, ಯುವತಿಯನ್ನು ಬೇರೊಬ್ಬ ವರನೊಂದಿಗೆ ಫೆ.14ರಂದು ಸಂಭ್ರಮದಿಂದ ಮದುವೆ ಮಾಡಿಕೊಟ್ಟಿದ್ದರು.
ಯುವಕ ನಿರಾಕರಿಸಿದ ಕಾರಣ ನಾನು ಬೇರೊಬ್ಬರನ್ನು ಮದುವೆಯಾದ. ಇದನ್ನೂ ಸಹಿಸದ ಆತ ನಮ್ಮಿಬ್ಬರ ಖಾಸಗಿತನದ ಫೋಟೊಗಳನ್ನು ಗಂಡನ ಮನೆಯವರಿಗೆ ತೋರಿಸಿದ. ಮದುವೆಯಾದ ಬಳಿಕವೂ ಅಲ್ಲಿಂದ ನಾನು ಮರಳಿ ಬರುವಂತೆ ಮಾಡಿದ. ಈಗ ಅವನೂ ಮದುವೆಯಾಗುತ್ತಿಲ್ಲ. ನನಗೆ ನ್ಯಾಯ ಕೊಡಿಸಬೇಕು’ ಎಂದು ಯುವತಿ ಆಗ್ರಹಿಸಿದರು.

‘ನನ್ನ ಖಾಸಗಿತನದ ಫೋಟೊಗಳನ್ನು ತೋರಿಸಿ ಮದುವೆ ಮುರಿಯಲಾಗಿದೆ ಎಂದು ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ನನ್ನನ್ನು ಹಾಗೂ ನನ್ನ ತಂದೆಯನ್ನು ಎಸ್ಐ ಪ್ರವೀಣ ಗಂಗೋಳ ನಿಂದಿಸಿದರು’ ಎಂದು ಯುವತಿ ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಐ ಪ್ರವೀಣ ಗಂಗೋಳ, ‘ಯುವತಿ ದೂರು ನೀಡಿದರೆ ತಕ್ಷಣ ಎಫ್‌ಐಆರ್ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.