ಬೆಳಗಾವಿ: ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಯಲ್ಲಮ್ಮನ ಗುಡ್ಡಕ್ಕೆ ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುಂದಾಗಿದ್ದು ಈ ಬಗ್ಗೆ ಇತ್ತೀಚಿಗೆ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಸಂಬಂಧಿತ ಅಧಿಕಾರಿಗಳ ಜೊತೆ ಸರ್ವೇ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ಕಾಮಗಾರಿಗೆ ಶೀಘ್ರವೇ ಚಾಲನೆ ಸಿಗಲಿದೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಹಿರೇ ಬಾಗೇವಾಡಿ ಗ್ರಾಮದ ಪಡಿ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಾಗರಿಕರ ವಿವಿಧ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಬೆಳಗಾವಿ-ಕಿತ್ತೂರು-ಧಾರವಾಡ ರೈಲ್ವೆ ಮಾರ್ಗ ನಿರ್ಮಾಣದಲ್ಲಿ ಯಾವ ಅಡೆತಡೆ ಇಲ್ಲ, ರೈತರು ಜಮೀನು ನೀಡಲು ಮುಂದಾಗಿದ್ದಾರೆ. ರೈತರಿಗೆ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದರಂತೆ ಮುಂದಿನ ದಿನಗಳಲ್ಲಿ ಸವದತ್ತಿ ಯಲ್ಲಮ್ಮ ಗುಡ್ಡದವರೆಗೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೂ ಒತ್ತು ನೀಡಲಾಗುವುದು ಎಂದು ತಿಳಿಸಿದರು.ಹಿರೇಬಾಗೇವಾಡಿ ಬಸವ ವೃತ್ತದ ಬಳಿ ಹೆದ್ದಾರಿಗೆ ಕೆಳ ಸೇತುವೆ ನಿರ್ಮಾಣ ಮಾಡಬೇಕು ಎಂದು ಜನ ಆಗ್ರಹಿಸಿದರು. ಈ ಸಂಬಂಧ ಅವರು ಸ್ಥಳದಲ್ಲಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತನಾಡಿ ನಾಗರಿಕರ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡುವಂತೆ ಸೂಚನೆ ನೀಡಿದರು. ಬಿಜೆಪಿ ಮುಖಂಡ ಧನಂಜಯ ಜಾಧವ, ಚೇತನ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.