ಬೆಳಗಾವಿ:

ಭಾರೀ ಕುತೂಹಲ ಕೆರಳಿಸಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಹುದ್ದೆಯ ಚುನಾವಣೆ ಇಂದು ನಡೆಯಲಿದೆ. ಪ್ರತಿಷ್ಠಿತ ಹುದ್ದೆಗಾಗಿ ಹಲವರು ಕಣ್ಣಿಟ್ಟಿದ್ದು ಯಾರು ಮೇಯರ್, ಯಾರು ಉಪಮೇಯರ್ ಆಗುತ್ತಾರೆ ಎಂದು ಕಾದುನೋಡಬೇಕಾಗಿದೆ.

58 ಸದಸ್ಯರನ್ನು ಹೊಂದಿರುವ ಪಾಲಿಕೆಯಲ್ಲಿ ಬಿಜೆಪಿ

ಬಹುಮತ ಹೊಂದಿದೆ.
ಬೆಳಗಾವಿ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್‌, ಉಪ ಮೇಯರ್‌ ಚುನಾವಣೆಯ ಚಟುವಟಿಕೆಗಳು ತೆರೆಮರೆಯಲ್ಲಿ ಜೋರಾಗಿದೆ.
ಮೇಯರ್‌ ಹುದ್ದೆ ಪರಿಶಿಷ್ಟ ಮಹಿಳೆ ಹಾಗೂ ಉಪ ಮೇಯರ್‌ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 17ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಸವಿತಾ ಕಾಂಬಳೆ ಮೇಯರ್‌ ಪಟ್ಟಕ್ಕೇರುವ ಸಾಧ್ಯತೆ ಹೆಚ್ಚಿದೆ. 35ನೇ ವಾರ್ಡ್‌ನ ಲಕ್ಷ್ಮೀ ರಾಠೋಡ ಅವರೂ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿ ಮಹಿಳಾ ಸದಸ್ಯರು ಇಲ್ಲ. ಮಹಾನಗರ ಪಾಲಿಕೆಯಲ್ಲಿ ಹೆಚ್ಚಿನ ಸಂಖ್ಯಾಬಲ ಹೊಂದಿರುವ ಬಿಜೆಪಿಯವರಿಗೆ ಮೇಯರ್‌ ಸ್ಥಾನ ಲಭಿಸಲಿವೆ.

ಉಪ ಮೇಯರ್‌ ಹುದ್ದೆ ಪುರುಷ ಅಭ್ಯರ್ಥಿಗೆ ಸಿಗುವ ಸಾಧ್ಯತೆಯಿದೆ. ಶಾಸಕ ಅಭಯ್‌ ಪಾಟೀಲ ಹಾಗೂ ಮಾಜಿ ಶಾಸಕ ಅನಿಲ್‌ ಬೆನಕೆ ಅವರು ಅವಿರೋಧವಾಗಿ ಮೇಯರ್‌ ಆಯ್ಕೆಗೆ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪಾಲಿಕೆ ಸದಸ್ಯರೊಂದಿಗೆ ಈ ಕುರಿತು ಚರ್ಚೆ ಮಾಡಿದ್ದಾರೆ. ಉಪ ಮೇಯರ್‌ ಹುದ್ದೆಗೆ ಕೆಲವು ಆಕಾಂಕ್ಷಿಗಳು ತೀವ್ರ ಸ್ಪರ್ಧೆ ನಡೆಸಿದ್ದಾರೆ. ಈಗಾಗಲೇ ಎರಡು ಬಾರಿ ಬಿಜೆಪಿ ನಾಯಕರು ಸರ್ವ ಸದಸ್ಯರ ಸಭೆ ನಡೆಸಿ ಒಮ್ಮತದ ಆಯ್ಕೆಗೆ ಪ್ರಯತ್ನಿಸಿದ್ದು ಕಂಡು ಬಂದಿದೆ.

21ನೇ ಅವಧಿಗೆ 2023ರ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್‌ ಆಗಿ ಶೋಭಾ ಸೋಮನಾಚೆ ಹಾಗೂ ಉಪಮೇಯರ್‌ ಆಗಿ ರೇಷ್ಮಾ ಪಾಟೀಲ ಆಯ್ಕೆಯಾಗಿದ್ದರು. ಅವರ ಅಧಿಕಾರಾವಧಿ ಫೆ.5ಕ್ಕೆ ಪೂರ್ಣಗೊಂಡಿದ್ದರಿಂದ ಪಾಲಿಕೆಯ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಫೆ.15ರಂದು ಮೇಯರ್‌ – ಉಪ ಮೇಯರ್‌ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದರು.

 

ಒಟ್ಟಾರೆ, ಇದೀಗ ಬೆಳಗಾವಿ ಮಹಾನಗರ ಸಭೆಯ ಹೊಸ ಮೇಯರ್ ಮತ್ತು ಉಪಮೇಯರ್ ಚುನಾವಣೆ ಭವಿಷ್ಯ ಕುತೂಹಲ ಕೆರಳಿಸಿದ್ದು, ಮುಂದಿನ ಒಂದು ವರ್ಷದವರೆಗೆ ಈ ಹುದ್ದೆ ಅಲಂಕರಿಸಲಿದ್ದಾರೆ.