ದೇಶದ ಅತ್ಯಂತ ಬಹುಬೇಡಿಕೆಯ ಶಿಲ್ಪಿಗಳಲ್ಲಿ ಒಬ್ಬರಾಗಿರುವ ಅರುಣ್ ಯೋಗಿರಾಜ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಂದೆ ಯೋಗಿರಾಜ್ ಮತ್ತು ಅಜ್ಜ ಬಸವಣ್ಣ ಶಿಲ್ಪಿ ಅವರಿಂದ ಪ್ರಭಾವಿತರಾಗಿ ಶಿಲ್ಪಕಲೆಯ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.
ಎಂಬಿಎ ವ್ಯಾಸಂಗ ಮಾಡಿ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದರೂ, ಶಿಲ್ಪಕಲೆಯ ಬಗ್ಗೆ ಅರುಣ್ ಅವರ ಸಹಜವಾದ ಉತ್ಸಾಹವು ಅವರನ್ನು 2008 ರಲ್ಲಿ ಮತ್ತೆ ಕಲಾ ಪ್ರಕಾರಕ್ಕೆ ಸೆಳೆಯಿತು. ರಾಷ್ಟ್ರವ್ಯಾಪಿ ಮನ್ನಣೆಯನ್ನು ಗಳಿಸಿದ ಅರುಣ್ ಅವರು ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆ, ಶಂಕರಾಚಾರ್ಯ ಮೂರ್ತಿ ಸೇರಿ ಹಲವು ಪ್ರಸಿದ್ಧ ಪ್ರತಿಮೆಗಳನ್ನು ಕೆತ್ತಿದ್ದಾರೆ.

ಅಯೋಧ್ಯೆ :
ಜನವರಿ 22ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯನ್ನು ಅಂತಿಮಗೊಳಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ ಅವರು ಕೆತ್ತನೆಯ ಮೂರ್ತಿಯನ್ನೇ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ ಎಂದು ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ. ಈಗ ಸದ್ಯ ಇರುವ ರಾಮಲಲ್ಲಾ ವಿಗ್ರಹವನ್ನೂ ಹೊಸ ದೇವಾಲಯದಲ್ಲೂ ಇಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಚಂಪತ್ ರಾಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಸ್ತುತ ರಾಮಲಲ್ಲಾ ವಿಗ್ರಹವನ್ನು ಹೊಸ ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗುವುದು ಎಂದಿದ್ದಾರೆ. ಮುಹೂರ್ತವನ್ನು (ಶುಭ ಸಮಯ) ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ನಿರ್ಧರಿಸಿದ್ದಾರೆ ಎಂದು ರಾಯ್ ಹೇಳಿದರು. ಧಾರ್ಮಿಕ ವಿಧಿವಿಧಾನಗಳು ಜ.16ರಿಂದ ಆರಂಭವಾಗಲಿದ್ದು, ಜ.21ರವರೆಗೆ ನಡೆಯಲಿದೆ ಜ.22ರಂದು ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಲಿದೆ. ‘ಪ್ರಾಣ ಪ್ರತಿಷ್ಠಾ’ ಮಾಡಲಿರುವ ವಿಗ್ರಹವು ಸುಮಾರು 150-200 ಕೆ.ಜಿ. ಜನವರಿ 18 ರಂದು, ವಿಗ್ರಹವನ್ನು ದೇವಾಲಯದ ‘ಗರ್ಭ ಗೃಹ’ದಲ್ಲಿ ಅದರ ಸ್ಥಾನದಲ್ಲಿ ಇರಿಸಲಾಗುತ್ತದೆ ಎಂದು ವಿವರಿಸಿದರು.

ಪ್ರಾಣ ಪ್ರತಿಷ್ಠಾ ಪೂರ್ವ ಸಂಸ್ಕಾರಗಳ ಔಪಚಾರಿಕ ಪ್ರಕ್ರಿಯೆಗಳು ಜನವರಿ 16 ರಿಂದ ಪ್ರಾರಂಭವಾಗಲಿದ್ದು, ಜನವರಿ 21 ರವರೆಗೆ ನಡೆಯಲಿದೆ ಎಂದು ಅವರು ಹೇಳಿದರು. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಜನವರಿ 22 ರಂದು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. “ಜನವರಿ 20 ಮತ್ತು 21 ರಂದು ಸಾರ್ವಜನಿಕರಿಗೆ ದರ್ಶನವನ್ನು ಮುಚ್ಚಲಾಗುವುದು” ಎಂದು ಅವರು ಹೇಳಿದರು. ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಏಳು ಅಧಿವಾಸಗಳಿದ್ದು, ಕನಿಷ್ಠ ಮೂರು ಅಧಿವಾಸಗಳು ಆಚರಣೆಯಲ್ಲಿವೆ. 121 ಆಚಾರ್ಯರು ವಿಧಿವಿಧಾನಗಳನ್ನು ನಡೆಸುತ್ತಾರೆ. ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಆಚರಣೆಯ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ, ಸಮನ್ವಯ, ನಿರೂಪಣೆ ಮತ್ತು ನಿರ್ದೇಶನ ಮತ್ತು ಪ್ರಧಾನ ಆಚಾರ್ಯರು. ಕಾಶಿಯ ಲಕ್ಷ್ಮಿಕಾಂತ್ ದೀಕ್ಷಿತ್ ಆಗಲಿದ್ದಾರೆ ಎಂದು ಅವರು ಹೇಳಿದರು.

ದೇಶದ ಮೂವರು ಪ್ರಮುಖ ಶಿಲ್ಪಿಗಳಾದ ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರಿಗೆ ರಾಮಲಲ್ಲಾ ಮೂರ್ತಿಯನ್ನು ತಯಾರಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೂವರೂ ಶಿಲ್ಪಿಗಳು ತಮ್ಮ ಕಲ್ಪನೆಯ ರಾಮ ಲಲ್ಲಾನ ಮೂರ್ತಿಯನ್ನು ನಿರ್ಮಿಸಿ ಸಮರ್ಪಿಸಿದ್ದಾರೆ. ಇವುಗಳ ಪೈಕಿ ಕನ್ನಡಿಗ ಅರುಣ್ ಯೋಗಿರಾಜ್ ಅವರು ಮೂರ್ತಿ ಆಯ್ಕೆಯಾಗಿದೆ.

ಎಚ್.ಡಿ ಕೋಟೆಯ ಕೃಷ್ಣ ಶಿಲೆ ಬಳಸಿ ಮಾಡಿದ ಮೂರ್ತಿ
ರಾಮಲಲ್ಲಾ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಕಲ್ಲು ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್‌ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಇದನ್ನು ರಚಿಸಲಾಗಿದೆ.

ಈ ವಿಗ್ರಹ ಆಯ್ಕೆಯಾಗಿರುವುದರ ಹಿಂದೆ ಕನ್ನಡಿಗ ಶಿಲ್ಪಿ ಅರುಣ್​ ಅವರ ಅಪಾರ ಪರಿಶ್ರಮ. ಭಕ್ತಿ, ಶ್ರದ್ಧೆಯಿದೆ. ಅದೇ ಕಾರಣಕ್ಕೆ ಕೋಟ್ಯಂತರ ರಾಮಭಕ್ತರ ಕನಸಿನ ರಾಮಮಂದಿರದಲ್ಲಿ ಅವರು ಕೆತ್ತಿರುವ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಆಗಲಿದೆ. ಆದರೆ, ಈ ವಿಗ್ರಹ ಆಯ್ಕೆಯಾಗುವುದಕ್ಕೆ ಅವಷ್ಟೇ ಕಾರಣವಲ್ಲ. ತೀರ್ಪುಗಾರರು ಅಂತಿಮಗೊಳಿಸುವ ಮೊದಲು ಇನ್ನಷ್ಟು ಸಂಗತಿಗಳನ್ನು ನೋಡಿ ಮೆಚ್ಚಿದ್ದಾರೆ.

ರಾಮಲಲ್ಲಾನ ಮೂರ್ತಿ ಕೆತ್ತನೆಗಾಗಿ ಸಹಸ್ರ​ ಸಂಖ್ಯೆಯ ಶಿಲ್ಪಿಗಳ ನಡುವಿನ ತುರುಸಿನ ಸ್ಪರ್ಧೆ ನಡೆದಿತ್ತು. ಇದು ಒಂದು ವರ್ಷದ ಹಿಂದಿನ ಪ್ರಕ್ರಿಯೆ. ಇಲ್ಲಿ ಆಯ್ಕೆಗೊಂಡ ಅಂತಿಮ ಮೂವರಲ್ಲಿ ಒಬ್ಬರಾಗಿದ್ದಾರೆ ಅರುಣ್​. ಆ ಮೂವರಲ್ಲಿಯೂ ಅರುಣ್​ ಅವರ ಭಾವಕ್ಕೆ ಹಾಗೂ ಕಲ್ಪನೆಗೆ ಮನ್ನಣೆ ದೊರಕಿದೆ ಎಂಬುದೇ ವಿಶೇಷ. ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಆಯ್ಕೆಯಾಗಿದ್ದ ಇನ್ನಿಬ್ಬರು ಮಹಾನ್ ಶಿಲ್ಪಿಗಳು. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಹಾನ್​ ಶಿಲ್ಪಿಗಳು. ಆದರೆ ಉಳಿದಿಬ್ಬರು ರಚಿಸಿದ ಮೂರ್ತಿಗಿಂತಲೂ ಅರುಣ್ ಅವರ ಕೆತ್ತನೆಗೆ ಪ್ರಾಶಸ್ತ್ಯ ಸಿಕ್ಕಿದೆ.

ಅರುಣ್ ಅವರು ರಚನೆ ಆಯ್ಕೆಯಾಗಲು ಮೊದಲ ಕಾರಣವೇ ವಿಗ್ರಹ ಮುಖದಲ್ಲಿನ ತೇಜಸ್ಸು. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ ಎಂಬುದನ್ನು ತೀರ್ಪುಗಾರರು ಮನಗಂಡಿದ್ದಾರೆ. ಪ್ರಾಣಪ್ರತಿಷ್ಠೆ ಆಗಲಿರುವ ವಿಗ್ರಹವು ಬಾಲ ರಾಮನಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅರುಣ್ ಅವರ ಕೆತ್ತನೆಯ ವಿಗ್ರಹದಲ್ಲಿ ಮುಗ್ಧ ಮಗುವಿನ ಸುಂದರ ನೋಟವಿದೆ. ಬಾಲ ರಾಮದೇವರು ಸಾಕ್ಷಾತ್ ಮಂದೆ ನಿಂತಿರುವಂತೆ ಕಾಣುವ ಮೂರ್ತಿಯನ್ನು ಅವರು ಕೆತ್ತಿದ್ದಾರೆ. ಅಲ್ಲದೆ ಹೆಚ್ಚು ನೈಜತೆಯಿಂದ ಕೂಡಿದೆ.

ಅರುಣ್​ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ.