ದೆಹಲಿ : ಇಡೀ ದೇಶದ ಗಮನ ಸೆಳೆದಿರುವ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ.
ಭಾರತೀಯ ಚುನಾವಣಾ ಆಯೋಗ ಇಂದು ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣೆಯ ದಿನಾಂಕಗಳನ್ನು ಘೋಷಿಸಿದರು.
ನವದೆಹಲಿ : 18ನೇ ಲೋಕಸಭೆಗೆ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಘೋಷಣೆ ಮಾಡಿದೆ. ಏಪ್ರಿಲ್ 19 ರಿಂದ ಜೂನ್ 1ರವರೆಗೆ ಚುನಾವಣೆ ನಡೆಯಲಿದ್ದು, ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ತಿಳಿಸಿದೆ. ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಇತ್ತೀಚೆಗೆ ಚುನಾವಣಾ ಆಯೋಗ ಸೇರಿರುವ ಆಯುಕ್ತದ ಜ್ಞಾನೇಶ್ ಕುಮಾರ್ ಹಾಗೂ ಸುಖ್ಬೀರ್ ಸಿಂಗ್ ಸಂಧು ಶನಿವಾರ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದರು. ಲೋಕಸಭೆ ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಇನ್ನು ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆ ಅವಧಿ ಕೂಡ ಜೂನ್ನಲ್ಲಿ ಮುಕ್ತಾಯಗೊಳ್ಳಲಿದೆ. ಆ ರಾಜ್ಯಗಳ ವಿಧಾನಸಭೆಗೂ ಲೋಕಸಭೆಯ ಜೊತೆಗೇ ಚುನಾವಣೆ ಘೋಷಣೆಯಾಗಿದೆ.
ಕರ್ನಾಟಕದಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 26ಕ್ಕೆ ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದರೆ, ಮೇ 7ಕ್ಕೆ 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಹಂತಗಳು ದಿನಾಂಕ ಲೋಕಸಭಾ ಕ್ಷೇತ್ರ
ಮೊದಲ ಹಂತ ಏಪ್ರಿಲ್ 19 102
2ನೇ ಹಂತ ಏಪ್ರಿಲ್ 26 89
3ನೇ ಹಂತ ಮೇ 7 94
4ನೇ ಹಂತ ಮೇ 13 96
5ನೇ ಹಂತ ಮೇ 20 49
6ನೇ ಹಂತ ಮೇ 25 57
7ನೇ ಹಂತ ಜೂನ್ 1 8
‘ಚುನಾವ್ ಕಾ ಪವ್೯, ದೇಶ್ ಕಾ ಗವ್೯’ ಎನ್ನುವ ಧ್ಯೇಯವಾಕ್ಯದಲ್ಲಿ ಈ ಬಾರಿಯ ಚುನಾವಣೆ ನಡೆಯಲಿದೆ. ನಮ್ಮ ತಂಡವು ಈಗ ಪೂರ್ಣಗೊಂಡಿದೆ, ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈ ಬಾರಿ ಒಟ್ಟು 97 ಕೋಟಿ ಮತದಾರರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. 10.5 ಲಕ್ಷ ಮತಗಟ್ಟೆಗಳು ಈ ಬಾರಿ ಇರಲಿದ್ದು, ಚುನಾವಣೆಗೆ 1.5 ಕೋಟಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. 55 ಲಕ್ಷ ಇವಿಎಂ, 4 ಲಕ್ಷ ವಾಹನಗಳು ಬಳಕೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. 1.8 ಕೋಟಿ ಮಂದಿ ಮೊದಲ ಬಾರಿ ಮತದಾರರಿದ್ದರೆ, 49.7 ಕೋಟಿ ಪುರುಷ, 47.1 ಕೋಟಿ ಮಹಿಳಾ ಮತದಾರರಿದ್ದಾರೆ.48 ಸಾವಿರ ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಜೂನ್ 16ಕ್ಕೆ ಈಗಿನ ಲೋಕಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮುನ್ನ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ ಪಕ್ಷ 52 ಸೀಟುಗಳನ್ನು ಗೆದ್ದು, ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಗಳಿಸುವುದಕ್ಕೂ ವಿಫಲವಾಗಿತ್ತು. ಈ ಬಾರಿ ವಿಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿದ್ದು, ಬಿಜೆಪಿ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿ ನಡೆಯುವುದು ನಿಶ್ಚಿತವಾಗಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಹಿಂದೆಂದಿಗಿಂತ ಹೆಚ್ಚು ಸ್ಥಾನ ಪಡೆದು ‘ಐತಿಹಾಸಿಕ ಜಯ’ ಜಯ ಗಳಿಸಲಿದೆ ಎಂದು ಭವಿಷ್ಯ ನುಡಿದಿವೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್ಡಿಎ 411 ಸೀಟುಗಳನ್ನೂ, ಬಿಜೆಪಿಯೊಂದೇ 350 ಸೀಟುಗಳನ್ನೂ ಗೆಲ್ಲಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.