” ನಾನು ಚುನಾವಣೆಗೆ ಖರ್ಚೇ ಮಾಡಿರಲಿಲ್ಲ.ಎಲ್ಲಾ ಮಾಡಿದ್ದು,ನೋಡಿಕೊಂಡಿದ್ದು ವಸಂತರಾವ ಅಣ್ಣಾ” ಎನ್ನುತ್ತಾರೆ ಗೋಕಾಕದ ಮಾಜಿ ಶಾಸಕ ಶ್ರೀ ಚಂದ್ರಶೇಖರ ಗುಡ್ಡಾಕಾಯು.
ಇಂದು ಬುಧವಾರ ಮುಂಜಾನೆ 10 ಗಂಟೆಗೆ ಬೆಳಗಾವಿಯ ಸಮಾದೇವಿಗಲ್ಲಿಯ ರಸ್ತೆಯಲ್ಲಿ ನಿಧಾನವಾಗಿ ,ಕೈಯಲ್ಲಿ ಚೀಲ ಹಿಡಿದುಕೊಂಡು ಹೊರಟಿದ್ದರು.ನಾನು ಬೈಕ್ ನಿಲ್ಲಿಸಿದೆ.ಗುರುತು ಹಿಡಿದರು.ಅಲ್ಲಿಯ ಆಸ್ಪತ್ರೆಗೆ ಹೊರಟಿದ್ದ ಗುಡ್ಡಾಕಾಯು ಅವರಿಗೆ ಎರಡು ಸಣ್ಣ ಮೆಟ್ಟಿಲು ಇಳಿಯಬೇಕಾಗಿತ್ತು.ಸ್ವಲ್ಪ ಕೈಹಿಡಿಯಿರಿ ಎಂದರು.ಕೈಹಿಡಿದು ಕೆಳಗಿಳಿಸಿ ನಿಂತೆ.
” ನನಗೆ ಈಗ 86 ವರ್ಷ ವಯಸ್ಸು.1972 ರಲ್ಲಿ ಗೋಕಾಕದಿಂದ ಆಯ್ಕೆಯಾಗಿದ್ದೆ.ಅದಕ್ಕೂ ಮೊದಲು ಮಹಾರಾಷ್ಟ್ರ ಸರಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ದಿ.ಶಂಕರರಾವ ಚವ್ಹಾಣರಿಗೆ ನಾನು ಆಪ್ತ ಕಾರ್ಯದರ್ಶಿಯಾಗಿದ್ದೆ.ಅಲ್ಲಿಂದ ನನ್ನನ್ನು ಬಿಡಿಸಿಕೊಂಡು ಬಂದ ರಾಯಬಾಗದ ವಸಂತರಾವ ಅಣ್ಣಾ ಗೋಕಾಕದಿಂದ ಚುನಾವಣೆಗೆ ನಿಲ್ಲಿಸಿದರು.ಆರಿಸಿಬಂದೆ” ಎಂದು ಸ್ಮರಿಸಿಕೊಂಡರು.
“ನನ್ನನ್ನು ಮಂತ್ರಿ ಮಾಡಲು ಮುಂದೆ ಬಂದ್ರು ದೇವರಾಜ ಅರಸ್ರು.ಒಲ್ಲೆಯಪ್ಪ ಮಾಡೋದಿದ್ರೆ ವಸಂತರಾವ್ ಅವರನ್ನೇ ಮಾಡ್ರಿ” ಎಂದೆ.ಅವರೇ ಮಂತ್ರಿ ಆದರು.
1972 ರಲ್ಲಿ ಗುಡ್ಡಾಕಾಯು ಅವರು 28,005 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.ಸಂಸ್ಥಾ ಕಾಂಗ್ರೆಸ್ಸಿನ ಬಿ.ಎಮ್.ಪಾಟೀಲರು 11144 ಮತಪಡೆದಿದ್ದರು.
1978 ರಲ್ಲಿ ನಾನು, ವಸಂತರಾವ ಸೇರಿಯೇ ಗೋಕಾಕ ಮತ್ತು ಅರಭಾವಿಗಳಲ್ಲಿ ಸೋತೆವು ಎಂದರು ಗುಡ್ಡಾಕಾಯು.ಕಾಂಗ್ರೆಸ್ ಇಬ್ಭಾಗವಾಗಿ ರೆಡ್ಡಿ ಕಾಂಗ್ರೆಸ್ಸಿನಿಂದ ಇವರಿಬ್ಬರೂ ಪರಾಭವಗೊಂಡಿದ್ದರು.
ಮಾಜಿ ಶಾಸಕರಾದ ಮೇಲೆ ಗುಡ್ಡಾಕಾಯು ಅವರು ಬೆಳಗಾವಿಯ ಮಹಾಂತೇಶನಗರದಲ್ಲಿ ವಾಸಿಸುತ್ತಿದ್ದು ಎಲ್.ಐ.ಸಿ.ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ.

✒️ಅಶೋಕ ಚಂದರಗಿ