ಮೈಸೂರು :
ದುಡಿಯುವ ವರ್ಗಗಳಿಗೆ ಚಿಕಿತ್ಸೆ ಭಾರ ಆಗದೆ ಉಚಿತವಾಗಿ ಚಿಕಿತ್ಸೆ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಕಾಳಜಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಫೆರಿಫೆರಲ್ ಕ್ಯಾನ್ಸರ್ ಕೇಂದ್ರದ ಕಟ್ಟಡದ ಶಂಕುಸ್ಥಾಪನೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಬಾಲಕಿಯರ ವಿದ್ಯಾರ್ಥಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಮೈಸೂರಿಗೆ ಜಿಲ್ಲಾ ಆಸ್ಪತ್ರೆ, ಟ್ರಾಮಾ ಸೆಂಟರ್, ಕಿದ್ವಾಯಿ ಆಸ್ಪತ್ರೆ ಕೊಟ್ಟಿದ್ದು ನಾನೇ. ಈಗಾಗಲೇ 40 ಕೋಟಿ ಕೂಡ ಕೊಟ್ಟಿದ್ದೇವೆ. ಇನ್ನೂ 50 ಕೋಟಿ ಕೊಡ್ತೀವಿ. ನೆಫ್ರೋಲಜಿ ಕೇಂದ್ರ ಬೇಕು ಎನ್ನುವ ಬೇಡಿಕೆಯೂ ಇದೆ. ಅದನ್ನೂ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಡಾ.ಯತೀಂದ್ರ ಅವರ ಕೋರಿಕೆಯಂತೆ ಮೈಸೂರಿನಲ್ಲಿ ಬೋನ್ ನ್ಯಾರೋ ಚಿಕಿತ್ಸಾ ಸೌಲಭ್ಯ ಒದಗಿಸುತ್ತೇವೆ ಎಂದರು.
ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ ಮೈಸೂರು. ಹೀಗಾಗಿ ಅಗತ್ಯ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತುಗಳನ್ನೂ ಮೈಸೂರಿಗೆ ಒದಗಿಸಬೇಕಾಗಿದ್ದು ಇದಕ್ಕೆ ನಾನು ಬದ್ದವಾಗಿದ್ದೇನೆ ಎಂದರು.
ಬಡವರಿಗೆ, ದುಡಿಯುವ ವರ್ಗಗಳಿಗೆ ಚಿಕಿತ್ಸೆ ಭಾರ ಆಗಬಾರದು. ಉಚಿತ ಅಥವಾ ಕಡಿಮೆ ಖರ್ಚಿನಲ್ಲಿ ಇವರಿಗೆ ಆರೋಗ್ಯ, ಚಿಕಿತ್ಸೆ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಕಾಳಜಿ.
ನಮ್ಮ ಸರ್ಕಾರ ಇರುವಾಗ ಮೈಸೂರು ನಗರಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸುತ್ತೇವೆ. ಪಾರಂಪರಿಕ ನಗರದ ಹೆಮ್ಮೆಯನ್ನು ನಾವು ಉಳಿಸುತ್ತೇವೆ. ಮೈಸೂರು ಜಿಲ್ಲೆಯ ಜನರ ಋಣ ತೀರಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಜಿಲ್ಲೆಯ ಶಾಸಕರುಗಳಾದ ಜಿ.ಟಿ.ದೇವೇಗೌಡ, ಶ್ರೀವತ್ಸ, ತನ್ವೀರ್ ಸೇಠ್, ಹರೀಶ್ ಗೌಡರು, ರವಿಶಂಕರ್, ಅನಿಲ್ ಚಿಕ್ಕಮಾದು, ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡರು, ಎ.ಹೆಚ್.ವಿಶ್ವನಾಥ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.