ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗೆ ಇಂಗ್ಲಿಷ್, ಹಿಂದಿ ಬರಲ್ಲ, ಅವರನ್ನು ಗೆಲ್ಲಿಸಬೇಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನೀಡಿದ್ದಾರೆ ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.
ತಮ್ಮ ಎದುರಾಳಿ ಪಕ್ಷದ ಅಭ್ಯರ್ಥಿ ಬಗ್ಗೆ ಜಯಪ್ರಕಾಶ್ ಹೆಗ್ಡೆ ಈ ರೀತಿಯ ಹೇಳಿಕೆ ನೀಡಿರುವುದು ಭಾರೀ ಟೀಕೆಗೆ ಕಾರಣವಾಗಿದೆ.
ಕೋಟ ಶ್ರೀನಿವಾಸ ಪೂಜಾರಿ ಒಬ್ಬ ಸಭ್ಯ ರಾಜಕಾರಣಿ ಎಂದು ಹೆಸರುವಾಸಿ. ಅವರ ಭಾಷಾ ಜ್ಞಾನದ ಬಗ್ಗೆ ಹಗುರವಾಗಿ ಮಾತನಾಡಿದ್ದು ಎಲ್ಲರಿಗೂ ಇಷ್ಟವಾಗಿಲ್ಲ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ, ಕನ್ನಡ ಪ್ರೇಮಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಕನ್ನಡದಲ್ಲೇ ಮಾತನಾಡುತ್ತಾರೆ. ಹೀಗಾಗಿ ಜಯಪ್ರಕಾಶ್ ಹೆಗ್ಡೆ ಬೇರೆ ಭಾಷೆ ಬರದವರಿಗೆ ಮತ ನೀಡಬೇಡಿ ಎಂದಿರುವುದು ಕನ್ನಡಕ್ಕೆ ಮಾಡಿದ ಅವಮಾನ. ಭಾಷೆ, ಪ್ರಾಂತ್ಯಗಳನ್ನೇ ಬಂಡವಾಳವಾಗಿಟ್ಟುಕೊಂಡು ಅವಮಾನಿಸುವುದು ಕಾಂಗ್ರೆಸ್ ದಶಕಗಳಿಂದಲೂ ಮಾಡುತ್ತಾ ಬಂದಿದೆ. ಮಾನ್ಯ, ಸಿದ್ದರಾಮಯ್ಯನವರೇ ಇದೇನಾ ನಿಮ್ಮ ಕನ್ನಡ ಪ್ರೇಮ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನೊಂದೆಡೆ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೇ ಪ್ರತಿಕ್ರಿಯಿಸಿರುವ ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿಯವರ ಭಾಷಾ ಜ್ಞಾನವನ್ನು ಪ್ರಶ್ನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಸಂಸದನಾಗಿ ಸಂಸತ್ ನಲ್ಲಿ ಭಾಷಾಂತರ ವ್ಯವಸ್ಥೆ ಇರುವುದರಿಂದ ಕನ್ನಡದಲ್ಲಿ ಮಾತನಾಡಬಹುದು. ಆದರೆ ಅಧಿಕಾರಿಗಳ ಜೊತೆ ಮಾತನಾಡುವಾಗ ಇಂಗ್ಲಿಷ್, ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ ಎಂದಿದ್ದೆ ಅಷ್ಟೇ ಎಂದಿದ್ದಾರೆ.
ಬ್ರಹ್ಮಾವರದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಲೋಕಸಭೆಯಲ್ಲಿ ಭಾಷಾಂತರಕಾರರು ಇರುವುದರಿಂದ ಕನ್ನಡದಲ್ಲಿಯೂ ಮಾತನಾಡಬಹುದು. ಆದರೆ, ಅಧಿಕಾರಿಗಳು ಹಾಗೂ ಕಚೇರಿಗಳಲ್ಲಿ ಕೆಲಸ ಮಾಡುವಾಗ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಜ್ಞಾನ ಅಗತ್ಯ ಎಂದು ಹೇಳಿಕೆ ನೀಡಿದ್ದೆ. ಸಂಸದನಾಗಿ ಸೇವೆ ಸಲ್ಲಿಸಿದ ಅನುಭವದಲ್ಲಿ ಹೇಳಿಕೆ ನೀಡಿದ್ದೇನೆಯೇ ಹೊರತು ಯಾರನ್ನೂ ಉದ್ದೇಶಿಸಿ ಹೇಳಿಲ್ಲ
ಎಂದು ಜಯಪ್ರಕಾಶ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.