ಬೆಳಗಾವಿ : ಶಂಕ್ರೆವ್ವ ಕೋಂ ತಿಪ್ಪಣ್ಣ ಕುರ್ಲಗಿರಿ, ಉರ್ಫ್ ರಾಮಪ್ಪನವರ ಇವರು ಧಾರವಾಡ ಜಿಲ್ಲಾ ಹುಬ್ಬಳ್ಳಿ ಶಹರದ ವಾರ್ಡ ಬಡಾವಣೆಯ ತಮ್ಮ ಆಸ್ತಿಗಳಾದ ಸಿ.ಟಿ.ಎಸ್ ನಂ.೩೫೨೪ರ ಸಿ.ಟಿ.ಎಸ್ ಕ್ಷೇತ್ರ ೨೦೫.೧/೯ ಚ.ಯಾರ್ಡ್ ಮತ್ತು ಧಾರವಾಡ ಜಿಲ್ಲಾ ಹುಬ್ಬಳ್ಳಿ ನಗರ ತಾಲೂಕು ಪೈಕಿ ನಾಗಶೆಟ್ಟಿಕೊಪ್ಪ ಗ್ರಾಮದ ಬ್ಲಾಕ ನಂ.೨೨/೧ ಕ್ಷೇತ್ರ ೧ ಎಕರೆ ೨೦ ಗುಂಟೆ ನೇದ್ದವುಗಳ ಕುರಿತು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಯಲ್ಲಮ್ಮನ ಗುಡ್ಡ ಸವದತ್ತಿ ಇವರ ಹೆಸರಿನಲ್ಲಿ ನೊಂದಾಯಿತ ಮೃತ್ಯು ಪತ್ರವನ್ನು ನರಗುಂದ ಸಬ್ ರಜಿಸ್ಟರ್ ಕಚೇರಿಯಲ್ಲಿ ೨೦೧೦ರ ಫೆಬ್ರವರಿ ೧೩ ರಂದು ನೊಂದಾಯಿಸಿ ಇಟ್ಟಿರುತ್ತಾರೆ.

ನಂತರ ಸದರಿ ಮೃತ್ಯು ಪತ್ರವನ್ನು ೨೦೧೬ರ ಎಫ್ರಿಲ್ ೨ ರಂದು ಖುದ್ದಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಬಂದು ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ನೀಡಿರುತ್ತಾರೆ. ಶಂಕ್ರೆವ್ವಳು ೨೦೧೭ರ ಫೆಬ್ರವರಿ ೧೫ ರಂದು ಮರಣ ಹೊಂದಿದ ನಂತರ ಅವಳ ಮಲಮಗನ ಹೆಂಡತಿ ರೇಣುಕಾ ಯಲ್ಲಪ್ಪ ಕುರ್ಲಗಿರಿ ಅವರು ಖೊಟ್ಟಿ ಮೃತ್ಯು ಪತ್ರವನ್ನು ಸೃಷ್ಟಿಸಿಕೊಂಡು ಸಿ.ಟಿ.ಎಸ್ ದಾಖಲೆಗಳಲ್ಲಿ ತಮ್ಮ ಹೆಸರುಗಳನ್ನು ದಾಖಲಿಸಿಕೊಂಡಿರುತ್ತಾರೆ.
ಈ ಮೇಲ್ಕಂಡ ವಿಷಯವನ್ನು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಯಲ್ಲಮ್ಮನಗುಡ್ಡ, ತಾಲೂಕು ಸವದತ್ತಿ ಜಿಲ್ಲಾ ಬೆಳಗಾವಿ ಅವರು ದೇವಸ್ಥಾನದ ಆಸ್ತಿಯನ್ನು ಕಬಳಿಸುವ ಹುನ್ನಾರ ಮಾಡುತ್ತಿರುವವರನ್ನು ಮನಗಂಡು ಅಲ್ಲಿಯ ಸುತ್ತಮುತ್ತಲಿನ ಭಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದು, ತದನಂತರ ಸರ್ಕಾರವು ಸದರಿ ವಿಷಯಕ್ಕೆ ಸಂಬಂಧಪಟ್ಟಂತೆ ಮಾನ್ಯ ಜಿಲ್ಲಾಧಿಕಾರಿಗಳು, ಬೆಳಗಾವಿ ಇವರಿಗೆ ಪತ್ರ ಬರೆದು ಮೃತ್ಯು ಪತ್ರವನ್ನು ಊರ್ಜಿತಗೊಳಿಸಲು ಅನುಭವಿಕ ವಕೀಲರನ್ನು ನೇಮಿಸಿಕೊಳ್ಳಲು ಆದೇಶಿಸಿರುತ್ತಾರೆ.
ಸರ್ಕಾರದ ಆದೇಶದ ಪ್ರಕಾರ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾದ ಎಸ್.ಸಿ.ಕೊಟಾರಗಸ್ತಿ ಅವರು ೧ನೇ ಅಧಿಕ ಹಿರಿಯ ದಿವಾಣಿ ನ್ಯಾಯಾಧೀಶರು, ಹುಬ್ಬಳ್ಳಿ ಇವರ ನ್ಯಾಯಾಲಯದಲ್ಲಿ ಅಸಲ ದಾವೆ ಓ.ಎಸ್ ನಂ.೩೨೯/೨೦೧೮ ನೇದ್ದನ್ನು ದಾಖಲಿಸಿದ್ದು, ಅದೇ ರೀತಿ ದಿ: ಶಂಕ್ರೆವ್ವಳ ಸೊಸೆ ರೇಣುಕಾ ಯಲ್ಲಪ್ಪ ಕುರ್ಲಗಿರಿ ಇವರು ಸಹ ಅಸಲು ದಾವೆ ಓ.ಎಸ್ ನಂ.೨೩/೨೦೧೯ ನೇದ್ದನ್ನು ದಾಖಲಿಸಿದ್ದು, ಮಾನ್ಯ ನ್ಯಾಯಾಲಯದವರು ಎರಡು ಪ್ರಕರಣಗಳನ್ನು ಒಟ್ಟುಗೂಡಿಸಿ ದೇವಸ್ಥಾನದ ಪರವಾಗಿ ಆರ್.ಎಸ್.ಹೆಗಡೆ ವಕೀಲರು ಹುಬ್ಬಳ್ಳಿ ಇವರು ವಾದ ಮಂಡಿಸಿದ್ದು, ವಿಲ್ ಸಲ್ಲಿಸಿದ ಸಮಯದಲ್ಲಿ ಎ.ಎಸ್.ಗ್ರಾಮೋಪಾದ್ಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪ್ರಕರಣ ದಾಖಲಸುವ ಸಮಯದಲ್ಲಿದ್ದ ಎಸ್.ಸಿ.ಕೊಟಾರಗಸ್ತಿ ಕಾರ್ಯನಿರ್ವಾಹಕ ಅಧಿಕಾರಿ ಅವರುಗಳ ಸಾಕ್ಷಿ ಹೇಳಿಕೆ ಮತ್ತು ಎಲ್ಲ ಸಾಕ್ಷಾಧಾರಗಳನ್ನು ಪರಿಗಣಿಸಿದ್ದು, ಅದೇ ರೀತಿ ದೇವಾಲಯದ ಸಿಬ್ಬಂದಿಯವರು ಪ್ರಕರಣದ ಎಲ್ಲ ದಾಖಲೆಗಳನ್ನು ಒದಗಿಸಿದ್ದು ಇರುತ್ತದೆ.
೨೦೨೪ರ ಮಾರ್ಚ್ ೧೨ ರಂದು ಅಸಲ ದಾವೆ ಓ.ಎಸ್ ನಂ.೨೩/೨೦೧೯ ನೇದ್ದನ್ನು ಖರ್ಚು ಸಹಿತ ವಜಾಗೊಳಿಸಿ, ಅಸಲ ದಾವೆ ಓ.ಎಸ್ ನಂ.೩೨೯/೨೦೧೮ ನೇದ್ದನ್ನು ಖರ್ಚು ಸಹಿತ ಪುರಸ್ಕರಿಸಿ ದಿ:ಶಂಕ್ರೆವ್ವ ತಿಪ್ಪಣ್ಣ ಕುರ್ಲಗಿರಿ ಇವರು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಹೆಸರಿಗೆ ೨೦೧೦ರ ಏಪ್ರಿಲ್ ೧೩ ರಂದು ನೊಂದಾಯಿಸಿದ್ದ ಮೃತ್ಯು ಪತ್ರವು ಕಾನೂನು ಬದ್ಧವಾಗಿ ಉರ್ಜಿತವೆಂದು ಆದೇಶಿಸಿರುತ್ತಾರೆ.
ದೇವಸ್ಥಾನದವರು ಸದರಿ ಆಸ್ತಿಗಳ ಕಬ್ಜಾವನ್ನು ಪಡೆದುಕೊಳ್ಳಲು ಮಾನ್ಯ ನ್ಯಾಯಾಲಯವು ನಿರ್ದೇಶಿಸಿರುತ್ತಾರೆ