ನವದೆಹಲಿ: ವಾಯುಪಡೆಯ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಅವರು ಸಶಸ್ತ್ರ ಪಡೆಗಳಲ್ಲಿನ ಹುದ್ದೆಯಿಂದ ನಿವೃತ್ತರಾದ ಸುಮಾರು ಎರಡೂವರೆ ವರ್ಷಗಳ ನಂತರ ಭಾನುವಾರ (ಮಾರ್ಚ್ 24) ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ ಠಾಕೂರ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾವ್ಡೆ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು.
ಆರ್‌ಕೆಎಸ್ ಭದೌರಿಯಾ ಅವರು 23ನೇ ವಾಯುಸೇನೆಯ ಮುಖ್ಯಸ್ಥರಾಗಿದ್ದರು. ಹಾಗೂ ಈ ಹುದ್ದೆಯನ್ನು 2019 ಸೆಪ್ಟೆಂಬರ್ 30ರಿಂದ 2021 ಸೆಪ್ಟೆಂಬರ್ 30ರ ವರೆಗೆ ಹೊಂದಿದ್ದರು.

ಅವರು ಆಗ್ರಾ ಜಿಲ್ಲೆಯ ಬಹ್ ತಹಸಿಲ್‌ನ ನಿವಾಸಿಯಾಗಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿ ಅವರನ್ನು ಗಾಜಿಯಾಬಾದ್‌ನಿಂದ ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಬಹುದಾಗಿದೆ.
ಮತ್ತೊಬ್ಬ ಭೂ ಸೈನ್ಯದ ಮುಖ್ಯಸ್ಥರಾಗಿದ್ದ ಜನರಲ್ ವಿ.ಕೆ. ಸಿಂಗ್ ಅವರು ಗಾಜಿಯಾಬಾದ್ ಕ್ಷೇತ್ರದಿಂದ ಹಾಲಿ ಲೋಕಸಭಾ ಸಂಸದರಾಗಿದ್ದಾರೆ. ಅವರು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ, ಮೊದಲ ಬಾರಿಗೆ 2014 ರಲ್ಲಿ ಮತ್ತು 2019 ರಲ್ಲಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾದ ಅಭ್ಯರ್ಥಿಗಳ ನಾಲ್ಕು ಪಟ್ಟಿಗಳಲ್ಲಿ ಘಾಜಿಯಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಬಿಜೆಪಿ ವರಿಷ್ಠರು ಶನಿವಾರ ಪಕ್ಷದ ಸಿಇಸಿ ಸಭೆ ನಡೆಸಿದ್ದು, ಇಂದು, ಭಾನುವಾರ ಐದನೇ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.