ಹುಬ್ಬಳ್ಳಿ : ಬಿಜೆಪಿ ಟಿಕೆಟ್ ಪಡೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬುಧವಾರದಿಂದಲೇ ಬೆಳಗಾವಿಯಲ್ಲಿ ಅಬ್ಬರದ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಹುಬ್ಬಳ್ಳಿ ನನ್ನ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ. ಬೆಳಗಾವಿಯನ್ನು ಕರ್ಮಭೂಮಿ ಮಾಡಿಕೊಂಡು ಕೆಲಸ ಮಾಡುವುದಾಗಿ ಅವರು ವಾಗ್ದಾನ ಮಾಡಿದ್ದಾರೆ. ಇಂದು ಹೋಳಿ ಹಬ್ಬ ಇರುವ ಕಾರಣ ಬೆಳಗಾವಿಗೆ ಹೋಗಿಲ್ಲ, ಬುಧವಾರದಿಂದ ಬೆಳಗಾವಿಗೆ ತೆರಳಿ ಪ್ರಚಾರ ಪ್ರಾರಂಭಿಸುವೆ, ಬೆಳಗಾವಿ ಭಾಗದಲ್ಲಿ ನಾನು ಸಾಕಷ್ಟು ಕೆಲಸ ಮಾಡಿರುವೆ. ಕಾಂಗ್ರೆಸ್ ಅಭ್ಯರ್ಥಿ ಯುವಕ ಆಗಿರುವ ಕಾರಣಕ್ಕೆ ಅವರನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಬೆಳಗಾವಿಯಿಂದ ಬಹುದೊಡ್ಡ ಅಂತರದಿಂದ ಗೆದ್ದು ಬರುವೆ. ಲೋಕಸಭಾ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಲಿದ್ದಾರೆ. ಹೀಗಾಗಿ ಬೆಳಗಾವಿಯಿಂದ ಬುಧವಾರದಿಂದ ಬಿರುಸಿನ ಚುನಾವಣಾ ಪ್ರಚಾರ ಮಾಡಲಾಗುವುದು ಎಂದು ಅವರು ತಿಳಿಸಿದರು.