ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಸ್ಥಾಪಕ, ಶಾಸಕ ಜನಾರ್ದನ ರೆಡ್ಡಿ ಅವರು ಇಂದು (ಸೋಮವಾರ) ಬಿಜೆಪಿ ಸೇರಿದರು.
ಇದೇ ವೇಳೆ ಅವರು ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದರು. ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಇತರ ನಾಯಕರು ಇದ್ದರು.
ಜನಾರ್ದನ ರೆಡ್ಡಿ ಅವರು ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಲು ಬೆಂಗಳೂರಿನ ತಮ್ಮ ನಿವಾಸ ‘ಪಾರಿಜಾತ’ದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಭಾನುವಾರ ಸಭೆ ನಡೆಸಿದ್ದರು.
ಕೆಆರ್‌ಪಿಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ದಮ್ಮೂರು ರಾಜಶೇಖರ್, ಬಿಜೆಪಿ ಸೇರುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ‘ ಎಂದು ಸಭೆ ಬಳಿಕ ತಿಳಿಸಿದ್ದರು.
ಗಾಲಿ ಜನಾರ್ದನ ರೆಡ್ಡಿ ಅವರು ಮರಳಿ ಪಕ್ಷಕ್ಕೆ ಬಂದಿರುವುದು ಬಹಳ ಸಂತೋಷದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗಾಲಿ ಜನಾರ್ದನ ರೆಡ್ಡಿ ಅವರು, ತಾವೇ ಕಟ್ಟಿದ ಪಕ್ಷವನ್ನು ವಿಸರ್ಜನೆ ಮಾಡಿ ಬಿಜೆಪಿಯೊಂದಿಗೆ ವಿಲೀನ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಶಕ್ತಿ ಬಂದಂತಾಗಿದೆ. ಮೋದಿ ಅವರ ನಾಯಕತ್ವ ಮೆಚ್ಚಿ ಮರು ಸೇರ್ಪಡೆ ಆಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಂದಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ʻʻಲೋಕಸಭೆಯಲ್ಲಿ 28 ಕ್ಷೇತ್ರ ಗೆಲ್ಲುವ ಗುರಿ ಇದೆ. ದಿನೇದಿನೆ ಮೋದಿ ಅವರ ಪರ ವಾತಾವರಣ ಹೆಚ್ಚುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆʼʼ ಎಂದು ಹೇಳಿದ್ದಾರೆ.
ಬೆಳಗ್ಗೆ ಹೋಗಿ ಮಧ್ಯಾಹ್ನ ಮರಳಿ ಬಂದ ಹಾಗೆ ಅನಿಸ್ತಿದೆ :
ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡುತ್ತಿದ್ದೇನೆ. ನನ್ನ ಕಷ್ಟದ ಕಾಲದಲ್ಲಿ ನನ್ನ ಬೆನ್ನಿಗೆ ನಿಂತ ಎಲ್ಲಾ ಕಾರ್ಯಕರ್ತರಿಗೂ ವಂದನೆ ಸಲ್ಲಿಸ್ತೇನೆ. ನಾವೆಲ್ಲರೂ ಸೇರಿ ಬಿಜೆಪಿಗೆ ಸೇರ್ಪಡೆ ಆಗಿದ್ದೇವೆ ಎಂದು ಹೇಳಿದರು.
ʻʻದೇಶದ ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರುವಿನಂತೆ ಕೆಲಸ ಮಾಡಿರುವ ಮೋದಿ ಅವರಿಗೆ ವಂದನೆಗಳು. ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿ, ಬಾಹ್ಯ ಬೆಂಬಲ ಬೇಡ. ಬಿಜೆಪಿಗೆ ಬಂದು ಕೆಲಸ ಮಾಡಿ ಅಂತ ಆಹ್ವಾನ ನೀಡಿದರು. ಅವರ ಆಹ್ವಾನ ಸ್ವೀಕರಿಸಿ ಬಂದಿದ್ದೇನೆ. ಇದು ನನ್ನ ಪೂರ್ವ ಜನ್ಮದ ಪುಣ್ಯʼʼ ಎಂದು ಜನಾರ್ದನ ರೆಡ್ಡಿ ಹೇಳಿದರು.
ಬಿ.ಎಸ್. ಯಡಿಯೂರಪ್ಪ ಅವರು ನನಗೆ ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಿಜೆಪಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಈಗ ಅವರ ಸುಪುತ್ರ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆಗಿದ್ದಾರೆ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರೋದು ನನ್ನ ಪುಣ್ಯ. ವಿಜಯೇಂದ್ರ ನೇತೃತ್ವದಲ್ಲಿ ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ಕೆಲಸ ಮಾಡುತ್ತೇವೆ ಎಂದು ಹೇಳಿದರು.
ʻʻಎಲ್ಲಾ ಏಳುಬೀಳುಗಳನ್ನು ನೋಡಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ನನ್ನ ಮನೆಗೆ ವಾಪಸ್ ಬಂದಿರೋ ಖುಷಿ ಇದೆ. ಕೆಲವು ಕಾರಣದಿಂದ ಹೊರಗೆ ಹೋಗಿದ್ದೆ. 13 ವರ್ಷಗಳ ಬಳಿಕ ವಾಪಸ್ ಬಂದಿದ್ದೇನೆ ಅನಿಸುತ್ತಿಲ್ಲ. ಬೆಳಗ್ಗೆ ಹೋಗಿ, ಮಧ್ಯಾಹ್ನ ಬಂದಿದ್ದೇನೆ ಅನಿಸುತ್ತಿದೆʼʼ ಎಂದು ಜನಾರ್ದನ ರೆಡ್ಡಿ ಹೇಳಿದರು.