ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಬಳಿಕ ಜೆಡಿಎಸ್‌ ಪಕ್ಷ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಜೆಡಿಎಸ್‌ ವರಿಷ್ಠ ಹೆಚ್‌.ಡಿ ದೇವೇಗೌಡರು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದ ಸದಸ್ಯದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಈಗ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯಾಗಿದ್ದಾರೆ. ಆದರೆ ಹಾಸನ ಲೋಕಸಭಾ ಚುನಾವಣೆಗೆ ಈಗಾಗಲೇ ಮತದಾನ ಮುಗಿದಿದೆ. ಜೂನ್ 4 ರಂದು ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಇದೀಗ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆದ್ದರೆ ಸಂಸದ ಸ್ಥಾನದಲ್ಲಿ ಮುಂದುವರಿಯುತ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.
ನೈತಿಕ ಹೊಣೆ ಹೊತ್ತು ರಾಜೀನಾಮೆ? ಹಾಸನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಗೆದ್ದರೆ ಸಂಸದ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಆದರೆ ದೂರು ಕೊಟ್ಟವರು, ತನಿಖಾಧಿಕಾರಿಗಳು ಕೋರ್ಟ್‌ನಲ್ಲಿ ಆರೋಪ ಸಾಬೀತು ಪಡಿಸುವುದು ಬಹಳ ಮುಖ್ಯವಾಗಿದೆ. ಕೋರ್ಟ್‌ನಲ್ಲಿ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ಸಾಬೀತು ಮಾಡಿದರೆ ಪ್ರಜಾಪ್ರತಿನಿಧಿ ಕಾಯ್ದೆಯ ಅಡಿ ಸಂಸದ ಸ್ಥಾನದಿಂದ ವಜಾಗೊಳಿಸುವ ಸಾಧ್ಯತೆ ಇದೆ. ಆದರೆ ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಚುನಾವಣೆಯಲ್ಲಿ ಗೆದ್ದರೂ ಜೆಡಿಎಸ್ ಪಕ್ಷ ತನಿಖೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವಂತೆ ಸೂಚಿಸುವ ಸಾಧ್ಯತೆ ಹೆಚ್ಚಾಗಿದೆ.