ಬೆಳಗಾವಿ : ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಅತ್ಯಧಿಕ ಮತ ಸಿಗುವ ನಿರೀಕ್ಷೆ ಮೂಡಿದೆ. ದಕ್ಷಿಣ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದ ಮೃಣಾಲ ಹೆಬ್ಬಾಳಕರ್, ಕ್ಷೇತ್ರದಲ್ಲಿ ಭಾರೀ ಮುನ್ನಡೆ ಖಚಿತ ಎಂದು ಹೇಳಿದ್ದಾರೆ.
ಖಾಸಬಾಗ್ ದ ಶ್ರೀ ಜಯಶಂಕರ ಭವನದಲ್ಲಿ ಮತ್ತು ಟಿಳಕವಾಡಿಯ ಶ್ರೀ ಛತ್ರಪತಿ ಶಿವಾಜಿ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಎಲ್ಲೆಡೆ ನಮಗೆ ಉತ್ತಮ ವಾತಾವರಣವಿದ್ದು, ಜನರು ಸ್ವಯಂ ಸ್ಫೂರ್ತಿಯಿಂದ ಪಕ್ಷಭೇದ ಮರೆತು ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಗೆ ಅನ್ಯಾಯ ಮಾಡಿದ ಹೊರಗಿನ ಅಭ್ಯರ್ಥಿಗೆ ಮತ ನೀಡಲು ಯಾರಿಗೂ ಮನಸ್ಸಿಲ್ಲ. ಏನೇ ಆದರೂ ನಾವು ಸ್ವಾಭಿಮಾನಿಗಳು. ನಮ್ಮ ಜಿಲ್ಲೆಯ ಅಭ್ಯರ್ಥಿಯನ್ನೇ ಬೆಂಬಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಪಕ್ಷ, ಜಾತಿ ಯಾವ ಭೇದವಿಲ್ಲದೆ ಜನರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ದಕ್ಷಿಣ ಮತ ಕ್ಷೇತ್ರದ ಬಹುತೇಕ ಎಲ್ಲ ಭಾಗಗಳಲ್ಲಿ ಪ್ರಚಾರ ನಡೆಸಲಾಗಿದೆ. ಅತ್ಯಂತ ಪ್ರೀತಿಯಿಂದ ಎಲ್ಲರೂ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಅವರಿಗೆಲ್ಲ ನೆಮ್ಮದಿ ಕಲ್ಪಿಸಿವೆ. ಹಾಗಾಗಿ ಈ ಬಾರಿ ಖಂಡಿತ ಬದಲಾವಣೆಯಾಗಲಿದೆ ಎಂದು ಮೃಣಾಲ ಹೆಬ್ಬಾಳಕರ್ ತಿಳಿಸಿದರು.

ಈ ಸಮಯದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.