ರಾಮನಗರ : ಚನ್ನಪಟ್ಟಣ ತಾಲೂಕು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹುಚ್ಚಯ್ಯನ ದೊಡ್ಡಿ ಗ್ರಾಮದಲ್ಲಿ ಕೂಲಿ ಕಾರ್ಮಿಕ ಶಿವರಾಮು (57 )ಬೆಳಗ್ಗೆ 7 ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದರು. ತಕ್ಷಣ ಕುಟುಂಬದವರು ಚಿಕಿತ್ಸೆಗೆ ಚನ್ನಪಟ್ಟಣಕ್ಕೆ ಕರೆತರುತ್ತಿದ್ದಾಗ ಉಸಿರು ನಿಂತಿದೆ. ನಂತರ ಮನೆಗೆ ತಂದು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ. ಆದರೆ ಮಧ್ಯಾಹ್ನ 12ರ ಸುಮಾರಿಗೆ ಶಿವರಾಮು ಎದ್ದು ಕುಳಿತಿದ್ದಾರೆ. ಅವರ ಪರೀಕ್ಷೆ ನಡೆಸಿದ ವೈದ್ಯರು ಶಿವರಾಮ ಅವರಿಗೆ ಹೃದಯಘಾತವಾಗಿದೆ, ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮತ್ತೆ ಅಸ್ವಸ್ಥಗೊಂಡಿದ್ದು ರಾಮನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಗ ಅಲ್ಲಿ ಪರೀಕ್ಷೆ ನಡೆಸಿದಾಗ ಶಿವರಾಮ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

ಒಟ್ಟಾರೆ, ಇದೊಂದು ವಿಚಿತ್ರ ಪ್ರಸಂಗಕ್ಕೆ ಸಾಕ್ಷಿ ಆಯಿತು. ಬೆಳಗ್ಗೆ ಕುಸಿದು ಬಿದ್ದು ಸತ್ತವನೆಂದು ಭಾವಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಮಧ್ಯಾಹ್ನ ಆ ವ್ಯಕ್ತಿ ಎದ್ದು ಕುಳಿತರು. ಆದರೆ, ಸಂಜೆ ಹೊತ್ತಿಗೆ ಮತ್ತೆ ಸಾಯುವ ಮೂಲಕ ವಿಚಿತ್ರ ಘಟನೆಗೆ ಹುಚ್ಚಯ್ಯನ ದೊಡ್ಡಿ ಸಾಕ್ಷಿಯಾಗಿದೆ.