ಬೆಂಗಳೂರು :
ನಗರದಲ್ಲಿ ಮೊದಲ ಬಾರಿ ನಡೆಯುತ್ತಿರುವ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಅರಮನೆ ಮೈದಾನ ಸಜ್ಜಾಗಿದ್ದು, ಇಂದು(ಶನಿವಾರ) ಬೆಳಗ್ಗೆ ಆರಂಭವಾಗುವ ಕೋಣಗಳ ಓಟದ ಸ್ಪರ್ಧೆ ರಾತ್ರಿಯಿಡೀ ನಡೆಯಲಿದೆ.
ಲಕ್ಷಾಂತರ ಜನರು ಕಂಬಳ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದ್ದು, ಶನಿವಾರ ಬೆಳಗ್ಗೆ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕಂಬಳ ಕರೆ ಉದ್ಘಾಟಿಸಲಿದ್ದಾರೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಬೆಂಗಳೂರು ಕಂಬಳ ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ತಲಾ ಆರು ಪ್ರಥಮ ಮತ್ತು ದ್ವಿತೀಯ ಬಹುಮಾನ ಹಾಗೂ 4 ತೃತೀಯ ಬಹುಮಾನಗಳನ್ನು ವಿತರಿಸಲಾಗುತ್ತದೆ.
‘ಸಾಂಪ್ರದಾಯಿಕ ಕಂಬಳ ಮತ್ತು ಸ್ಪರ್ಧಾತ್ಮಕ ಕಂಬಳ ಎಂದು ಎರಡು ಪ್ರಕಾರದ ಕಂಬಳ ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವುದು ಶಕ್ತಿ, ಯುಕ್ತಿ, ಪ್ರತಿಷ್ಠೆಯ ಸ್ಪರ್ಧಾತ್ಮಕ ಕಂಬಳ. ಇದರಲ್ಲಿ ಹಿರಿಯ ಮತ್ತು ಕಿರಿಯ ವಿಭಾಗಗಳಿವೆ. ಸುಮಾರು 200 ಜೋಡಿ ಕೋಣಗಳು ಸ್ಪರ್ಧಿಸುವ ಸಾಧ್ಯತೆ ಇದೆ. ಮೊದಲ ಸುತ್ತಿನಲ್ಲಿ ಗೆದ್ದ ಒಂದು ತಂಡ ಮುಂದಿನ ಹಂತಕ್ಕೆ ಹೋಗುತ್ತದೆ’ ಎಂದು ಕಂಬಳ ತಜ್ಞ ಗುಣಪಾಲ್ ಕಡಂಬ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಶನಿವಾರ ಮತ್ತು ಭಾನುವಾರ ಮಧ್ಯಾಹ್ನದವರೆಗೆ ಟ್ರಯಲ್ ಓಟ ಇರುತ್ತದೆ. ಮಧ್ಯಾಹ್ನದ ನಂತರವೇ ನೈಜ ಸ್ಪರ್ಧೆ ಆರಂಭವಾಗುತ್ತದೆ. ಶನಿವಾರ ರಾತ್ರಿಯಿಡೀ ಓಟದ ಸ್ಪರ್ಧೆ ಇರುತ್ತದೆ. ರಾತ್ರಿ 10 ರ ಬಳಿಕ ಮೈಕ್ ಬಳಕೆ ಮಾಡುವುದಿಲ್ಲ’ ಎಂದು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದರು.
‘ಕಳೆದ 18 ವರ್ಷಗಳಿಂದ 200ಕ್ಕೂ ಹೆಚ್ಚು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಆದರೆ, ಕರಾವಳಿಯಿಂದ ಹೊರಗೆ ಬಂದು ಸ್ಪರ್ಧಿಸುತ್ತಿರುವುದು ಇದೇ ಮೊದಲು. 180 ಕ್ಕೂ ಹೆಚ್ಚು ಪದಕ, ಬಹುಮಾನಗಳನ್ನು ಗೆದ್ದಿದ್ದೇವೆ. ಈ ಬಾರಿಯು ಉತ್ತಮ ಸ್ಪರ್ಧೆ ನೀಡುವ ವಿಶ್ವಾಸವಿದೆ’ ಎಂದು ಜೋಡಿ ಕೋಣದ ಮಾಲೀಕ ಪಾಂಡು ತಿಳಿಸಿದರು.
ಎರಡು ವರ್ಷಗಳ ಹಿಂದೆ ಕಕ್ಕೆಪದವು ಕಂಬಳದಲ್ಲಿ ಕೇವಲ 8.76 ಸೆಕೆಂಡುಗಳಲ್ಲಿ ಶ್ರೀನಿವಾಸಗೌಡ ಎಂಬುವರು 100 ಮೀಟರ್ ಕ್ರಮಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರು ಕಂಬಳದಲ್ಲಿ ಆ ದಾಖಲೆ ಮುರಿದು ಹೊಸ ದಾಖಲೆ ನಿರ್ಮಾಣವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಕಂಬಳ ತಜ್ಞ ಗುಣಪಾಲ್ ಕಡಂಬ ತಿಳಿಸಿದರು.
ಕಂಬಳದ ಜೊತೆಗೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹುಲಿ ವೇಷ ಕುಣಿತ, ಯಕ್ಷಗಾನ ಸೇರಿದಂತೆ ಕರಾವಳಿಯ ಕಲೆ, ಸಂಸ್ಕೃತಿಯ ಪ್ರದರ್ಶನವಿದೆ. ಸಿನಿಮಾ ನಟ, ನಟಿಯರು, ಸಂಗೀತ ನಿರ್ದೇಶಕರು, ಗಾಯಕರು ಬೆಂಗಳೂರು ಕಂಬಳದಲ್ಲಿ ಪ್ರದರ್ಶನ ನೀಡುತ್ತಾರೆ. ಅದಕ್ಕಾಗಿ ಎರಡು ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ. 80ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದು, ಕರಾವಳಿಯ ನಾನಾ ಬಗೆಯ ಆಹಾರ, ತಿಂಡಿ-ತಿನಿಸುಗಳು, ಪಾನೀಯಗಳು ಇರಲಿದೆ. ಶನಿವಾರ ಮತ್ತು ಭಾನುವಾರ ಕಂಬಳದ ಜೊತೆಗೆ ಬೆಂಗಳೂರಿಗರಿಗೆ ಭರಪೂರ ಮನೋರಂಜನೆ ಸಿಗಲಿದೆ.