ದೆಹಲಿ : ಅರವಿಂದ ಕೇಜ್ರವಾಲ್ ಅವರೇ, ನಿಮಗೊಂದು ಕೆಟ್ಟ ಸುದ್ದಿ ಇದೆ. 2029ರ ವರೆಗೆ ನರೇಂದ್ರ ಮೋದಿ ಅವರೇ ದೇಶದ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. 2029ರ ನಂತರವೂ ಪ್ರಧಾನಿ ಮೋದಿಯೇ ನಮ್ಮನ್ನು ಮುನ್ನಡೆಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೊದಲು ಅಪರಾಧ ಕೃತ್ಯಗಳನ್ನು ಎಸಗಲು ಯೋಜನೆ ರೂಪಿಸುತ್ತಾರೆ. ಅದರಂತೆ ಮೊದಲು ದುಷ್ಕೃತ್ಯಗಳನ್ನು ನಡೆಸುತ್ತಾರೆ. ಜನರು ಇದರ ಬಗ್ಗೆ ಮಾತನಾಡುವುದಕ್ಕೆ ಆರಂಭಿಸಿದ ನಂತರ ಕೃತ್ಯಗಳನ್ನು ಮರೆಮಾಚಲು ಯತ್ನಿಸುತ್ತಾರೆ. ಬಳಿಕ ಮತ್ತೊಮ್ಮೆ ದೌರ್ಜನ್ಯ ನಡೆಸುತ್ತಾರೆ. ಇದಕ್ಕೆ ಸಂದೇಶ್‌ಖಾಲಿ ಪ್ರಕರಣವೇ ಸ್ಪಷ್ಟ ಉದಾಹರಣೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಮಹಿಳಾ ಸಿಎಂ ಆಗಿಯೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಮಾತನಾಡಲಿಲ್ಲ. ಸಂದೇಶ್‌ಖಾಲಿ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಲಿಲ್ಲ. ಆದರೆ, ಹೈಕೋರ್ಟ್ ಮಧ್ಯಪ್ರವೇಶಿಸಬೇಕಾಯ್ತು. ನಂತರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ಇಡೀ ‘ಇಂಡಿಯಾ ಒಕ್ಕೂಟ ಬಹಿಷ್ಕರಿಸಿತ್ತು. ಮುಸ್ಲಿಮರ ವೋಟ್ ಬ್ಯಾಂಕ್ ಭಯದಿಂದ ಈ ಕ್ರಮ ಅನುಸರಿಸಿತ್ತು ಎಂದು ಹೇಳಿದರು.