ಹಲವು ವರುಷದ ಬಯಕೆ ಗೇರುಸೊಪ್ಪದ ಸಮೀಪದ ಹಾಡಗೇರಿಗೆ ಹೋಗುವ ತವಕವಿತ್ತು. ಏನಾದರಾಗಲಿ ಇಂದು ಹೋಗಲೇಬೇಕೆಂಬ ನಿರ್ಧಾರದೊಂದಿಗೆ ನಗರಬಸದಿಕೇರಿಯಿಂದ ಗೇರುಸೊಪ್ಪದ ಅರಸರ ಕಾಲದ ಹಾಡುಗರಹಳ್ಳಿಗೆ ಬೆಳಿಗ್ಗೆಯೇ ಹೊರಟೆ.

ಅಲ್ಲಲ್ಲಿ ಕೇಳುತ್ತಾ ನಮ್ಮೂರಿನ ಅಳಿಯಂದಿರ ಹೆಸರಾದ ಸಣ್ಣಶಿವಜ್ಜನ ಮಕ್ಕಳಾದ ಮಂಜಯ್ಯ, ರಾಮ ಮುಂತಾದವರ ಮನೆ ವಿಳಾಸ ಪಡೆದು ಒಂದು ಊರಿಗೆ ಹೋಗಿ ನಿಂತೆ.

ಬಂದು ನಿಂದೊಡನೆ ಹತ್ತಾರು ಜನ ಏಕ ಕಾಲದಲ್ಲಿ ನನ್ನೆದುರು ಜಮಾಯಿಸಿದರು. ಎಲ್ಲ ಪರಿಚಿತರಂತೆ ಮಾತನಾಡಲು ಆರಂಭಿಸಿದರು ಕಾರಣ ಅಪರೂಪದ ಅತಿಥಿಯಂತೆ ಕಂಡುಬಂದ‌ ನನ್ನನ್ನು ಎಲ್ಲರೂ ಅವಸರವಾಗಿ ಮಾತನಾಡಿಸಿದರು. ಎಲ್ಲರಿಗೂ ಏಕಕಾಲದಲ್ಲಿ ಉತ್ತರಿಸಲು ನನಗೆ ಅಸಾಧ್ಯವೆನಿಸಿತು.

ಈ ಸಂದರ್ಭ ನಾನು ಚಿಕ್ಕವನಿದ್ದಾಗ ನಮ್ಮ ಊರಿನ ಮರಾಠಿಗರಾದ ಗಣೇಶ ಗುಂಡಿಬೈಲು (ಕಲ್ಲಿ ರಾಮಜ್ಜನ ಮಗ) ಭೇಟಿಯಾಯಿತು. ನನ್ನನ್ನು ಕಂಡೊಡನೆ ಹೆಸರು ಹೇಳಿ ಕರೆದು ಗುರತು ಹಿಡಿದುದು ನನಗೆ ಸಂತೋಷ ನೀಡಿತು. ಹಲವು ಹಳೆಯ ತಲೆಮಾರುಗಳ ಜನರೊಂದಿಗೆ ಬೆರೆಯುವ ಸುವರ್ಣ ಗಳಿಗೆಯೂ ದೊರೆಯಿತು. ಈ ನಡುವೆ ತುಂಬಾ ಪರಿಚಿತರಂತೆ ನನ್ನನ್ನು ಕರೆದು ಮನೆಗೆ ಹೋಗೋಣ ಎಂದು ನನಗೆ ಆತಿಥ್ಯ ನೀಡಿದ ಓರ್ವರ ಕುರಿತು ನನಗೆ ಎಲ್ಲೋ ನೋಡಿದ ನೆನಪು ಪುನರಾವರ್ತನೆ ಆಗದೇ ಹೋಯಿತು. ಮನೆ ಒಳಗೆ ಹೋದೊಡನೆಯೇ ಲೋಕು ಅರಾಮಿದಿಯಾ ನಾನ್ಯಾರು ಹೇಳು? ಬಹು ಸಂತೋಷದಿ ನನ್ನನ್ನು ನೋಡಿ ಖುಷಿಯಿಂದ ಮಾತಾಡಿದರು. ನನಗೋ ಅವರ ಆತ್ಮೀಯತೆ ಮಾತಿಗೆ ಉತ್ತರಿಸಲಾಗದೆ ನೋಡಿ ನಗಾಡಲಾರಂಭಿಸಿದೆ. ಅಯ್ಯೋ ನೀನು ನಾಲ್ಕು ಐದು ವರ್ಷದವನಿರುವಾಗ ನನ್ನೊಂದಿಗೆ ಜಗಳವಾಡಿ ಎರಡು ಜಡೆ ಹಾಕಿಸಿಕೊಂಡಿದ್ದು ನೆನಪಿಲ್ಲವೇ ಎಂದು ಹತ್ತಿರದಿಂದ ಮಾತಾಡಿಸಿದರು. ಆಗ ನಾನು ಇನ್ನೂ ಹೇಳದೇ ಹೋದರೆ ಮುಜುಗರಕ್ಕೀಡಾದೇನೆಂದು ತಿಳಿದು ನೀವ್ಯಾರು ಎಂದು ಕೇಳಿದೆ.

”ಏ ನಾನು ಗಣೇಶಜ್ಜನ ಮಗಳು, ಜಿ ಜಿ ತಂಗಿ ದೇವಮ್ಮ‌ನೆನಪಿಲ್ಲ ನಿಂಗೆ”
ಎಂದು ಹೇಳಿದಾಗ ಹಳೆ ನೆನಪಿನ ಎಳೆಯೊಂದು ನೆನಪಿನ ದೋಣಿಯೇರಿತು.
ಅದು ಹೆಚ್ಚು ಕಡಿಮೆ ನಲವತ್ತು ವರ್ಷದ ಹಿಂದಿನ‌ ನೆನಪು ಆಗಿನ ನೆನಪು ತಟ್ಟನೆ ಕಣ್ಣೆದುರು ಬಂದು ಕಣ್ಣಾಲಿಗಳು ತೇವಗೊಂಡವು. ನಮ್ಮೂರಿನ ಮರಾಠಿಗರ ಹೆಣ್ಣುಮಗಳೋರ್ವಳಿಗೆ ನನ್ನ ಮೇಲಿನ ಅಭಿಮಾನ ಕಂಡು ಮೌನವಾದೆ. ಒಂದರ್ಧ ಗಂಟೆ ಲೋಕಾಭಿರಾಮ ಮಾತು ಹಳೆಯ ನೆನಪೆಂಬ ಕನಸಿನ ಲೋಕ ತೆರೆಯಿತು. ಕುಶಲೋಪರಿ ಅಂದಿನ ಜೀವನ ಬದುಕು ಸಂಸಾರ ನನ್ನ ಆಟಾಟೋಪ ಎಲ್ಲವೂ ಅರ್ಧಗಂಟೆ ಮಿಂಚಿ ಮರೆಯಾದವು.

ಬೂದ, ಪುರುಷಜ್ಜನ ಮಗಳು ಬಾನಾಮತಿ, ಗುಂಡಿಬೈಲು ಕೃಷ್ಣಣ್ಣನ ಮಗಳು, ಲುಮ್ಮಜ್ಜನ ಮೊಮ್ಮಗಳು ಎಲ್ಲರೂ ಮಾತಾಡಿಸಿದರು ನನಗೆ ಮಾತನಾಡುತ್ತಾ ಸಮಯ ಕಳೆಯುವ ಹಂಬಲ, ಆದರೆ ಸಮಯವಕಾಶ ಇಲ್ಲದಾಯಿತು.
ಹಾಡಗೇರಿ ಎಂಬ ಊರು ಗೊತ್ತಿಲ್ಲದಂತೆ ಅದು ನಮ್ಮ ಊರಿನ ಭಾವನೆ ನೀಡಿತು.
ಬೇಸರವೆಂದರೆ ಮಾತಿನ ಭರದಲ್ಲಿ ಅವರೊಂದಿಗೆ ಒಂದು ಫೋಟೋ ತೆಗೆದುಕೊಳ್ಳುವುದನ್ನು ಮರೆತೇ ಬಿಟ್ಟೆ ಛೇ ಎಂತಹ ಮರೆವು ನನ್ನದು.

✒️ಲೋಕರಾಜ ಜೈನ್ ಸಾಳ್ವಕುಲಜ ನಗಿರೆಸುತ