
ಮಂಗಳೂರು: ಶಾಲೆಗಳಲ್ಲಿ ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮ ನಡೆಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದರಲ್ಲಿ ಬೊಂಬೆಯಾಟ, ಕೋಲಾಟ ಮೊದಲಾದ ಮನರಂಜನಾ ಕಲೆಗಳ ಸಾಲಿಗೆ ಭೂತಾರಾಧನೆ ಸೇರಿಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
‘ದೈವಾರಾಧನೆ’ ಸಾವಿರಾರು ವರ್ಷಗಳಿಂದ ತುಳುನಾಡಿನಲ್ಲಿರುವ ಧಾರ್ಮಿಕ ಆಚರಣೆ, ಇದು ಮನರಂಜನಾ ಕಲೆಯಲ್ಲ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನಡೆಸುವ ಪ್ರತಿಭಾ ಕಾರಂಜಿಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ಸಂಗತಿಯಲ್ಲ. ಇದರಿಂದ ಸಮಸ್ತ ತುಳುನಾಡಿನ ದೈವಭಕ್ತರ ನಂಬಿಕೆಗೆ ಧಕ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ತುಳುನಾಡಿನ ಆಚಾರ ವಿಚಾರಗಳಿಗೆ ಕಿಂಚಿತ್ ಧಕ್ಕೆಯಾದರೂ ಸಹಿಸಲಾಗದು. ಈ ಆದೇಶವನ್ನು ಹಿಂಪಡೆಯಬೇಕು ಎಂದು ಶಾಸಕರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.