ಬೆಳಗಾವಿ : ಕನ್ನಡ ಸಾಹಿತ್ಯವು ಜಗತ್ತಿನ ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿ ನಿಲ್ಲುತ್ತದೆ. ಇಂಥ ಶ್ರೇಷ್ಠ ಸಾಹಿತ್ಯಕ್ಕೆ ಜನಪದವೇ ಮೂಲ ಧಾತು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಜಾನಪದ ಹಾಡುಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಜಗತ್ತಿನ ಶ್ರೇಷ್ಠ ಜ್ಞಾನವೆಲ್ಲ ನಮ್ಮ ಜನಪದದಲ್ಲಿದೆ. ಜನಪದ ಹಾಡುಗಳಲ್ಲಿ ನಮ್ಮ ಜೀವನೋತ್ಸಾಹ ಅಡಗಿದೆ. ಅದನ್ನು ಕೇಳುತ್ತ ಹೋದಲ್ಲಿ, ನಮ್ಮ ನಾಡಿನ ಇಡೀ ಚರಿತ್ರೆ, ನಾಡಿನ ಜ್ಞಾನ ಪರಂಪರೆಯೇ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಇಂತಹ ಅಮೂಲ್ಯ ಜ್ಞಾನವನ್ನು ನಾವೆಲ್ಲ ಓದಬೇಕು, ಅದರಿಂದ ಬದುಕನ್ನು ಕಟ್ಟಿಕೊಳ್ಳಬೇಕು.
ವಿದ್ಯಾರ್ಥಿಗಳು ವಿಸ್ಮೃತಿ ಪ್ರಜ್ಞೆಯಿಂದ ಹೊರಬರಬೇಕು. ಈ ನೆಲದ ಸೌರಭದ ಪ್ರತೀಕವಾದ ಜನಪದವನ್ನು ನಾವೆಲ್ಲರೂ ಆಸ್ವಾದಿಸುವುದರ ಜೊತೆಗೆ ಅದನ್ನು ಜೀವಂತವಾಗಿ ಇಡುವತ್ತ ಹೆಜ್ಜೆ ಹಾಕಬೇಕು. ಜಾಗತೀಕರಣೋತ್ತರ ಕಾಲಘಟ್ಟದ ಭರಾಟೆಯಲ್ಲಿ ಈ ನೆಲದ ಸೊಗಡಿಗೆ ಧಕ್ಕೆ ಆಗದಂತೆ ನಾವು ಕಾಳಜಿ ವಹಿಸಬೇಕು. ತಮ್ಮ ಕಂಠ ಸಿರಿಯ ಮೂಲಕ ವಿಶ್ವದಾದ್ಯಂತ ಕನ್ನಡ ಜಾನಪದ ಸೌರಭವನ್ನು ಪಸರಿಸಿದವರು ಅಪ್ಪಗೆರೆ ತಿಮ್ಮರಾಜು ಅವರು. ಅವರು ನಮ್ಮ ಸಂಸ್ಕೃತಿಯ ವಾರಸುದಾರರೆಂದು ಹೇಳಿದರು.ಅಂತರರಾಷ್ಟ್ರೀಯ ಖ್ಯಾತ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರು ಜನಪದ ಹಾಡು, ಕುಣಿತಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಸೂಪ್ತ ಪ್ರತಿಭೆಯನ್ನು ಹೊರತರಬೇಕು. ಜನಪದ ಹಾಡು, ಕುಣಿತಗಳೊಂದಿಗೆ ವಿದ್ಯಾರ್ಥಿಗಳಿಗೆ ಕನ್ನಡ ಕಂಪನ್ನು ಬಿತ್ತರಿಸಿದರು. ಮಾಯದಂಥ ಮಳೆ, ಚೆಲ್ಲಿದರೂ ಮಲ್ಲಿಗೆ, ತಿಂಗಳು ಮುಳುಗಿದವೋ, ಗಾಡಿಯ ದಾರಿ ಸಾಗಲಿ ಆದಿಯಾಗಿ ಹತ್ತಾರು ಜನಪದ ಹಾಡುಗಳನ್ನು ಹಾಡಿ ಈ ನೆಲದ ಸಾಂಸ್ಕೃತಿಕ ಜಗತ್ತನ್ನು ವಿದ್ಯಾರ್ಥಿಗಳ ಕಣ್ಣ ಮುಂದೆ ತಂದಿಟ್ಟರು. ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಓ ನನ್ನ ಚೇತನದಂಥ ಗೀತೆಗಳ ಜೊತೆಗೆ ಬೇಂದ್ರೆ ಮತ್ತು ಇತರ ಕವಿಗಳ ಗೀತೆಗಳನ್ನು ಹಾಡಿದರು. ಇದರಿಂದ ವಿದ್ಯಾರ್ಥಿಗಳ ಕನ್ನಡಾಭಿಮಾನ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ರಾಷ್ಟ್ರೀಯ ಬಸವ ತತ್ವ ಪರಿಷತ್ತಿನ ಅಧ್ಯಕ್ಷ ಬೆಂಗಳೂರಿನ ಅರುಣ ಕುಮಾರ್ ಡಿ.ಟಿ. ಅವರು ಕನ್ನಡ ನೆಲದಲ್ಲಿರುವ ಪ್ರತಿಯೊಬ್ಬರು ಕನ್ನಡ, ಕನ್ನಡ ಸಂಸ್ಕೃತಿಗೆ ಗೌರವ ಕೊಡಬೇಕು. ಇದು ಈ ನೆಲಕ್ಕೆ ಕೊಡುವ ಗೌರವವಾಗಿದೆ. ಅಪ್ಪಗೆರೆ ತಿಮ್ಮರಾಜು ಅವರು ಕನ್ನಡದ ಜನಪದ ಹಾಡುಗಳನ್ನು ಸಾಗರದಾಚೆಗೂ ಕೊಂಡೊಯ್ದು ಕನ್ನಡದ ಸಂಸ್ಕೃತಿಯನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಅವರು ಶೈಕ್ಷಣಿಕ ಪಠ್ಯಕ್ರಮಗಳಲ್ಲಿ ಜನಪದ ಸಾಹಿತ್ಯ ಹೆಚ್ಚು ಅಳವಡಿಸಬೇಕು. ಅದರಿಂದ ವಿದ್ಯಾರ್ಥಿಗಳಿಗೆ ಜಾನಪದದ ಕುರಿತು ಹೆಚ್ಚು ತಿಳಿವಳಿಕೆ ಬರುತ್ತದೆ. ಪ್ರತಿಯೊಬ್ಬರೂ ತಮ್ಮ ಸಮುದಾಯದ ಜನಪದ ಸಂಸ್ಕೃತಿಯೊಂದಿಗೆ ಮುಖಾಮುಖಿಯಾಗುವುದರ ಜೊತೆಗೆ ಆ ಸಂಸ್ಕೃತಿಯನ್ನು ಅರಿಯಬಹುದಾಗಿದೆ. ಅಪ್ಪಗೆರೆ ತಿಮ್ಮರಾಜು ಅವರು ನಮ್ಮ ನಡುವೆ ಇರುವ ಜಾನಪದ ಭಂಡಾರ ಎಂದರು.
ರಾಚವಿಯ ಕನ್ನಡ ರಾಜ್ಯೋತ್ಸವದ ಸರಣಿ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ. ಎಂ ಸಿ. ಎರಿಸ್ವಾಮಿ ವಂದಿಸಿದರು. ವಿದ್ಯಾರ್ಥಿನಿಯರಾದ ಶಾಂಭವಿ ಥೋರ್ಲಿ ನಿರೂಪಿಸಿದರು, ಪ್ರಿಯಾಂಕಾ ತಿಲಗಾರ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.