ಸೌದಿ ಅರೇಬಿಯಾದ ರಾಜಧಾನಿ ರಿಯಾಧ
ಪ್ರವೇಶಿಸುತ್ತಿದ್ದಂತೆಯೇ ನನಗೆ ಗೀತರಾಮಾಯಣದ ಒಂದು ಹಾಡು ನೆನಪಾಯಿತು….

ಮನುನಿರ್ಮಿತ ನಗರಿ/ ಅಯೋಧ್ಯಾ,‌/ ವಿಶಾಲವದು ಆ ನಗರಿಯ ವಿಸ್ತಾರ ನಿಂತಿವೆ ಸುಂದರ ಸೌಧಗಳೆತ್ತರ…
ಅಗಲಗಲ ರಸ್ತೆಗಳು..
ರಸ್ತೆ ತುಂಬ ಕಾರುಗಳು..
ಬಗೆಬಗೆಯ ವಿನ್ಯಾಸದ ಎತ್ತರೆತ್ತರ ಕಟ್ಟಡಗಳು…

ಪ್ರತಿ ವರ್ಷ ಐದು ದಶಲಕ್ಷ ಪ್ರವಾಸಿಗರು ಭೆಟ್ಟಿ ಕೊಡುವ ರಿಯಾಧ್ ಅತ್ಯಾಧುನಿಕ ಮತ್ತು ಅತ್ಯಂತ ವಿಸ್ತಾರವಾದ ನಗರ. ಈಗಿನ ದೊರೆಯ ಕಾಲದಲ್ಲಿ ಈ ದೇಶದಲ್ಲಿ ಇದ್ದ ಹಲವು ಬಗೆಯ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಮತ್ತು ಪ್ರವಾಸಿಗರನ್ನು ಸೆಳೆಯಲು ಬಗೆಬಗೆಯ ಆಕರ್ಷಣೆಗಳನ್ನು ನಿರ್ಮಿಸುತ್ತಿರುವುದರಿಂದ ಬರುವವರ ಸಂಖ್ಯೆ ಬಹಳ ಹೆಚ್ಚಿದೆ. ಹಿಂದೆ ಬೇರೆ ದೇಶದ ಮಹಿಳೆಯರಿಗೂಇಲ್ಲಿ ಬುರ್ಖಾ ಕಡ್ಡಾಯವಿತ್ತು. ಈಗ ಆ ನಿಯಮ ಇಲ್ಲ. ಸ್ಥಳೀಯರು ಮಾತ್ರ ಬುರ್ಖಾ ತೊಡುತ್ತಾರೆ. ನನ್ನ ಮಗಳೂ ಮೊದಲ ಸಲ ಬಂದಾಗ ಬುರ್ಖಾ ತೊಟ್ಟೇ ಹೊರಗೆ ಹೋಗಬೇಕಿತ್ತು. ಈಗ ಮುಕ್ತ ಮುಕ್ತ.

ಮನೋರಂಜನೆಗೆ ಇದ್ದ ನಿರ್ಬಂಧ ಸಹ ಈಗ ಇಲ್ಲ. ದುಬೈ ಮಾದರಿಯ ಬೆಳವಣಿಗೆ ಕಾಣುತ್ತಿರುವ ರಿಯಾಧ್ ವಿದೇಶಿ ಪ್ರವಾಸಾಸಕ್ತರು ನೋಡಲೇಬೇಕಾದ ತಾಣವಾಗಿ ಬೆಳೆಯುತ್ತಿದೆ.

* ಇತರ ಕೆಲ ವಿಶೇಷಗಳು
ಈ ದೇಶದ ಕರೆನ್ಸಿಗೆ ರಿಯಾಲ್ ಎನ್ನುತ್ತಾರೆ. ಒಂದು ರಿಯಾಲ್ ಎಂದರೆ ಭಾರತದ 22 ರೂ. ಗಳು. ಆದರೆ ಇದನ್ನೂ ನಮ್ಮದನ್ನೂ ಹೋಲಿಸಿ ವ್ಯವಹಾರ ಮಾಡಲು ಹೋಗಬಾರದು. ಎಲ್ಲ ದೇಶಗಳಿಗೂ ಅವರದೇ ಆದ ಆರ್ಥಿಕ ವ್ಯವಸ್ಥೆಯ ಸ್ವರೂಪ, ಜೀವನ ಮಟ್ಟ ಬೇರೆಬೇರೆಯದೇ ಆಗಿರುತ್ತದೆ.
ಉದಾಹರಣೆಗೆ – ಒಂದು ಕಪ್ ಕಾಫಿಗೆ 20 ರಿಯಾಲ್ ತೆಗೆದುಕೊಳ್ಳುತ್ತಾರೆಂದಿಟ್ಟುಕೊಳ್ಳಿ. ಅದನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹಿಡಿಯಲು ನೋಡಿದರೆ 440 ರೂ. ಆಗುತ್ತದೆಂದಾಗ ಹೃದಯಾಘಾತವಾಗಲೂಬಹುದು ಕೆಲವರಿಗೆ. ಒಂದು ಕಪ್ ಕಾಫಿಗೆ 440 ರೂಪಾಯಿಯೇ! ಛೇ..
ಅಲ್ಲಿಯ 500 ರಿಯಾಲ್ ನೋಟು ಎಂದರೆ ನಮ್ಮ 12 ಸಾವಿರ ರೂ. ನಮ್ಮಲ್ಲಿ 500 ರ ನೋಟಿಗೆ 500 ರೂ. ಮಾತ್ರ. ಅವರದು ಅವರಿಗೆ, ನಮ್ಮದು ನಮಗೆ. ಡಾಲರ್, ದಿರ್ರಮ್, ಬಾಟ್ , ರಿಯಾಲ್ ಏನೇ ಇದ್ದರೂ ಅವರವರ ದೇಶಕ್ಕೆ ಸರಿ. . ಹೋಲಿಕೆ ಮಾಡಿ ಅಯ್ಯೋ ದೇವರೇ ಎಂದುಕೊಳ್ಳಬೇಕಿಲ್ಲ.
*
ಜುಬೇಲ್ ನಿಂದ ಸುಮಾರು 500 ಕಿ. ಮೀ. ಕಾರಿನಲ್ಲಿ ಪ್ರಯಾಣ ಮಾಡಿ ರಿಯಾಧ್ ಗೆ ಬಂದೆವು. ಆದರೆ ಪೂರ್ತಿ ಪ್ರಯಾಣದಲ್ಲಿ ನಾವು ಕಂಡಿದ್ದು ಎರಡು ಮೂರು ಬಸ್ಸುಗಳನ್ನು ಮಾತ್ರ. ಬಸ್ ಸಂಚಾರ ತೀರಾ ವಿರಳ. ಕೆಲವು ಭಾಗಗಳಲ್ಲಿದೆಯಂತೆ. ರಸ್ತೆಯ ಒಂದು ಲೈನ್ ನಲ್ಲಿ ಕಾರುಗಳು, ಇನ್ನೊಂದು ಲೈನ್ ನಲ್ಲಿ ಟ್ರಕ್ಕು ಲಾರಿಗಳು ಕಾಣಸಿಗುತ್ತವೆ, ಅಷ್ಟೇ.
*
ಈ ದೇಶದ ಆದಾಯ ಇರುವುದೇ ಪೆಟ್ರೋಲಿಯಂ/ ಗ್ಯಾಸ್ ಇಂಧನಗಳಿಂದ. ಜಗತ್ತಿನ ಎಲ್ಲ ದೇಶಗಳೂ ಈ ವಿಷಯದಲ್ಲಿ ಅರಬ್ ದೇಶಗಳನ್ನೇ ಅವಲಂಬಿಸಬೇಕಾಗಿದೆಯಾದ್ದರಿಂದ ಹಣದ ಹೊಳೆ ಹರಿದುಬರುತ್ತಿರುತ್ತದೆ. ಆದರೆ ಉಳಿದೆಲ್ಲ ವಸ್ತುಗಳೂ ಬೇರೆ ದೇಶಗಳಿಂದಲೇ ಬರಬೇಕು. ಕುಡಿಯಲು ಸಮುದ್ರದ ನೀರೇ ಗತಿ. ಅದನ್ನು ಶುದ್ಧೀಕರಿಸಿ ಸಂಗ್ರಹಿಸಿ ನೀಡುವ ದೊಡ್ಡ ದೊಡ್ಡ ಸ್ಟೋರೇಜ್ ಗುಮ್ಮಟಗಳು ಅಲ್ಲಲ್ಲಿ ಕಂಡುಬರುತ್ತವೆ.
*
ಅರಬ್ ದೇಶಗಳಿಗೆ ಅವುಗಳದೇ ಆದ ಇತಿಮಿತಿಗಳಿವೆ. ಬಹುಭಾಗ ಮರಳುಗಾಡು. ವಾರ್ಷಿಕ ಸರಾಸರಿ 25೦ ಮಿಲಿಮೀಟರಿಗಿಂತ ಕಡಿಮೆ ಮಳೆ. ಮಧ್ಯಭಾಗದಲ್ಲಿ ಹೆಚ್ಚೆಂದರೆ 2೦ ಬಗೆಯ ಸಸ್ಯಪ್ರಕಾರಗಳಿದ್ದರೆ ಅಂಚಿಗೆ 17 ಬಗೆಯ ಸಸ್ಯಪ್ರಕಾರಗಳು ಕಾಣಸಿಗುತ್ತವೆ. ಮರುಭೂಮಿಯಲ್ಲಿ ಹುಟ್ಟಿ ಬದುಕಿ ಬೆಳೆಯುವ ಸಸ್ಯಗಳೇ ಬೇರೆ. ಇವಕ್ಕೆ ಕ್ಸಿರೋಫೈಟ್ಸ್ ಎಂದೂ ಹೇಳುತ್ತಾರೆ. ಉದ್ದ ಬೇರುಗಳುಳ್ೞದ್ದಕ್ಕೆ ಫ್ರಿಟೋಫೈಟ್ಸ್ ಎನ್ನುತ್ತಾರೆ. ಕಳ್ಳಿಗಿಡ, ಅಗೇವ್, ಕ್ಯಾಸ್ಟರಿನಾ, ಮೊಹಲಂಬಿಕಿಯಾ ಮೊದಲಾದವು ಗಳು ಜಾಸ್ತಿ. ಮರಗಳಾಗಿ ಬೆಳೆಯುವ ಕೆಲ ತಳಿಗಳೂ ಇವೆ. ಎಲಿಫ್ಯಾಂಟ್ ಮರಗಳು ಬಿಳಿ ನಕ್ಷತ್ರಾಕಾರದ ಹೂಗಳನ್ನು ಬಿಡುತ್ತವೆ. ಆರ್ಗನ್ ಪೈಪ್ ಕಳಿಗಿಡ ನೀಲಿ ಹೂ ಬಿಡುತ್ತದೆ. ಪೂರ್ತಿ ಬೆಳೆದ ನಂತರ ಇದಕ್ಕೆ ನೀರಿನ ಅಗತ್ಯವಿರುವುದಿಲ್ಲ. ಅಲ್ಲದೆ ಇದಕ್ಕೆ ಔಷಧಿ ಗುಣವೂ ಇದೆ. ಕಾಡು ಜನ ನೆಗಡಿ, ಹೊಟ್ಟೆನೊವುಗಳಿಗೆಲ್ಲ ಬಳಸುತ್ತಿದ್ದರಂತೆ. ಡಸರ್ಟ್ ಮ್ಯಾರಿಗೋಲ್ಡ್ ಹಳದಿ ಹೂ ಬಿಡುತ್ತದೆ. ಅದು ಬಹಳ ವಿಷಕಾರಿಯಾದುದು. ಡಸರ್ಟ್ ಲಿಲ್ಲಿ ಸಸ್ಯದ ಗಡ್ಡೆ ಆಹಾರಕ್ಕೆ ಬಳಸುತ್ತಾರೆ. .
ತಾಳೆ ಜಾತಿಯ ಮರಗಳದೇ ಬೇರೆ ವೈಶಿಷ್ಟ್ಯ. ಇದರಲ್ಲಿ 26೦೦ ಪ್ರಕಾರದ ತಳಿಗಳುಂಟಂತೆ. ಸ್ಯಾಗ್ವರೋ ಎಂಬ ಕಳ್ಳಿ ತಳಿಗೆ 15೦ ವರ್ಷ ಆಯುಷ್ಯವಂತೆ. ಇದರ ಕೆಂಪು ಹಣ್ಣಿನಲ್ಲಿ 2 ಸಾವಿರ ಬೀಜಗಳಿರುತ್ತವೆ.
(ಮುಂದುವರಿಯುತ್ತದೆ)

* ಎಲ್.ಎಸ್.ಶಾಸ್ತ್ರಿ, ಬೆಳಗಾವಿ