ಮೂಲತಃ ಇಸ್ಲಾಮಿಕ್ ಧಾರ್ಮಿಕ ತಳಹದಿಯ ( ಕುರಾನ್ / ಸುನ್ನತ್) ಷರಿಯಾ ಕಾನೂನು ಹೊಂದಿರುವ ಸೌದಿ ಅರೇಬಿಯಾದಲ್ಲೂ ಈಗ ಬದಲಾದ ಕಾಲ ಪರಿಸ್ಥಿತಿಗಳಿಗೆ ತಕ್ಕಂತೆ ಕೆಲವೊಂದು ಬದಲಾವಣೆಗಳು ಕಂಡುಬರತೊಡಗಿವೆ. ಈಗಿನ ಅರಸನ ಕಾಲಾವಧಿಯಲ್ಲಿ ಹಲವು ವಿಷಯಗಳಲ್ಲಿ ಸುಧಾರಣಾ ಕ್ರಮಗಳು ಹಂತಹಂತವಾಗಿ ಜಾರಿಗೊಳ್ಳುತ್ತ ಬಂದಿದ್ದು ಕಾನೂನು ನ್ಯಾಂಗ ವ್ಯವಸ್ಥೆ ಸಹ ಮೊದಲಿನ ಸ್ವರೂಪದಲ್ಲಿ ಉಳಿದುಕೊಂಡಿಲ್ಲ. ಷರಿಯಾ ಕಾನೂನುಗಳು ೭ ರಿಂದ ೧೦ ನೇ ಶತಮಾನಗಳಲ್ಲಿ ರೂಪುಗೊಂಡಿದ್ದು ಹೆಚ್ಚಾಗಿ ಎಲ್ಲ ಅರಬ್ ರಾಷ್ಟ್ರಗಳಲ್ಲೂ ಅದನ್ನೇ ಅನುಸರಿಸುತ್ತ ಬರಲಾಯಿತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವು ಸಾಕಷ್ಟು ಟೀಕೆಗಳಿಗೆ ಒಳಗಾದ ನಂತರ ಅವುಗಳನ್ನು ಸಡಿಲಿಸುವ ಕಡೆಗೆ ಗಮನ ನೀಡಲಾಯಿತು.
ಸಾಮಾನ್ಯವಾಗಿ ಷರಿಯತ್ ಧಾರ್ಮಿಕ ಕಾನೂನುಗಳು ಅತ್ಯಂತ ಕಠಿಣ ಮತ್ತು ಕ್ರೂರವಾಗಿರುವುದು ಎಲ್ಲರಿಗೂ ತಿಳಿದ ವಿಷಯ. ವಿಭಿನ್ನ ಅಪರಾಧಗಳಿಗನುಗುಣವಾಗಿ ಬಹಿರಂಗ ಶಿರಚ್ಛೇದನ, ತಾಡನ, ಅಂಗ ಛೇದನ, ಕಲ್ಲೆಸೆತ ಮೊದಲಾದ ಶಿಕ್ಷೆಗಳು ಜಾರಿಯಲ್ಲಿವೆ. ಧರ್ಮಭ್ರಷ್ಟತೆಯೂ ಇಲ್ಲಿ ಗಂಭೀರವಾದ ಅಪರಾಧವೆ. ಇತರ ಧರ್ಮದವರ ಬಹಿರಂಗ ಆಚರಣೆಗಳು ಇಲ್ಲಿ ನಿಷಿದ್ಧ. ಬೇರೆ ಯಾವ ಧರ್ಮದ ಮಂದಿರಗಳ ನಿರ್ಮಾಣಕ್ಕೂ ಅವಕಾಶವಿಲ್ಲ. ಇಸ್ಲಾಂ ನವರು ಬಿಟ್ಟು ಬೇರೆಯವರು ಮತಾಂತರ ಮಾಡುವಂತಿಲ್ಲ. ಮಹಿೞೆಯರಿಗಂತೂ ಸಾಕಷ್ಟು ನಿರ್ಬಂಧಗಳಿದ್ದೇಇವೆ. ೧೯೮೫ ರಲ್ಲಿ ಕೊನೆಯ ಕ್ರಿಶ್ಚಿಯನ್ ಪಾದ್ರಿಯನ್ನು ದೇಶದಿಂದ ಹೊರಹಾಕಲಾಯಿತು. ಮೊನ್ನೆ ಜ. ೨೨ ರಂದು ಭಾರತದಲ್ಲಿ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ನಡೆದಾಗ ಕುವೈತ್ ನ ಯಾವುದೋ ಒಂದು ಕಂಪನಿಯಲ್ಲಿ ಕೆಲಸ ಮಾಡುವ ಒಂಬತ್ತು ಜನ ಭಾರತೀಯರು ತಮ್ಮ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಕ್ಕೆ ಅವರನ್ನು ರಾತ್ರೋರಾತ್ರಿ ಭಾರತಕ್ಕೆ ವಾಪಸು ಕಳಿಸಲಾಯಿತು.
ಸೌದಿಯಲ್ಲಿ ೨೦೦೮ ರಿಂದೀಚೆ ನ್ಯಾಯಾಂಗ ಕಾನುನು ಕ್ಷೇತ್ರದಲ್ಲೂ ಬದಲಾವಣೆಗಳು ಕಂಡುಬರತೊಡಗಿದವು. ೨೦೧೮ ರಲ್ಲಿ ಮೊದಲ ಬಾರಿ ಕಾರ್ಮಿಕ ನ್ಯಾಯಾಲಯ ಅಸ್ತಿತ್ವಕ್ಕೆ ಬಂತು. ಧಾರ್ಮಿಕ ಪೋಲೀಸರ ಅತಿಯಾದ ಅಧಿಕಾರ ಬಹಳಷ್ಟು ಮೊಟಕುಗೊಳಿಸಲಾಯಿತು. ಬಾಲ ಅಪರಾಧಿಗಳ ಮರಣ ದಂಡನೆಗೆ ಬದಲು ಗರಿಷ್ಠ ೧೦ ವರ್ಷಗಳ ಜಯಲು ಶಿಕ್ಷೆ ನಿಯಮ ಬಂತು. ೨೦೨೦ ರಿಂದ ತಾಡನ ಶಿಕ್ಷೆ ರದ್ದುಪಡಿಸಲಾಯಿತು. ಬದಲಿಗೆ ದಂಡ ಜೈಲುವಾಸ ವಿಧಿಸಲಾಗುತ್ತಿದೆ. ಹೆಣ್ಣು ಮಕ್ಕಳ ವಿವಾಹದ ವಯೋಮಿತಿ ಕನಿಷ್ಠ ೧೫ ವರ್ಷಕ್ಕೆ ಏರಿಸಲಾಯಿತು. ಮಹಿಳೆಯರಿಗೆ ಪಾಸಪೋರ್ಟ್ ಪಡೆಯಲು ಅನುಮತಿಸಲಾಯಿತು. ವಾಹನ ಚಾಲನೆಗೆ ಅವಕಾಶ ದೊರಕಿತು. ಮಹಿಳೆಯರ ಡ್ರೆಸ್ ಕೋಡ್ ಸಹ ಬದಲಾಯಿತು. ಮನೋರಂಜನೆಗೆ ಮುಕ್ತ ಅವಕಾಶ ದೊರಕಿತು.
೨೦೧೪ ರಿಂದ ಸೌದಿಗಳಿಗೆ ಪಾಕ್, ಬಾಂಗ್ಲಾ, ಮ್ಯಾನಮಾರ್ ಮತ್ತು ಚಾಡ್ ದೇಶಗಳ ಮಹಿಳೆಯರನ್ನು ವಿವಾಹವಾಗುವುದಕ್ಕೆ ನಿಷೇಧವಿದೆ. ವಿವಾಹ ವಿಚ್ಛೇದನದ ಪ್ರಕರಣಗಳು ಶೇ. ೫೦ ರಷ್ಟು ಇವೆ. ನಾಲ್ಕರತನಕ ಮದುವೆಯಾಗುವ ಅವಕಾಶವಿದ್ದು ತಲ್ಲಾಕ್ ಸಹ ಜಾರಿಯಲ್ಲಿದೆ. ಆದರೂ ಬಹುಪತ್ನಿತ್ವದ ಪದ್ಧತಿ ಈಚೆಗೆ ಕಡಿಮೆಯಾಗುತ್ತಿದೆಯೆಂದೂ ಹೇಳಲಾಗುತ್ತಿದೆ.
ಕಾನೂನು ಬಿಗಿಯಾಗಿರುವುದರಿಂದ ಅಪರಾಧಗಳ ಪ್ರಮಾಣ ಸಾಕಷ್ಟು ಕಡಿಮೆಯಾಗಿರುವುದನ್ನೂ ಅಲ್ಲಗಳೆಯುವಂತಿಲ್ಲ. ೨೦೦೭-೧೦ ರ. ನಡುವೆ ಕೇವಲ ಒಂದು ಅಂಗಚ್ಛೇದನದ ಪ್ರಕರಣ ವರದಿಯಾಗಿದೆ. ದೇಶದಲ್ಲಿ ಒಟ್ಟು ೩೪೫ ಜನ ಮರಣದಂಡನೆ ಶಿಕ್ಷೆಗೊಳಗಾಗಿದ್ದಾರೆ. ವಾಮಾಚಾರ ಮಾಟದ ಎರಡು ಪ್ರಕರಣಗಳು ವರದಿಯಾಗಿವೆ.
ಇಲ್ಲಿಯದು ನಿರಂಕುಶ ಪ್ರಭುತ್ವವಾಗಿರುವುದರಿಂದ ರಾಜಕೀಯವಾಗಿ ಅರಸು ಮನೆತನದವರದೇ ಪರಮಾಧಿಕಾರ. ಅಭಿವ್ಯಕ್ತಿ/ ವಾಕ್ ಸ್ವಾತಂತ್ರ್ಯ ದ ಪ್ರಶ್ನೆಯೇ ಇಲ್ಲ. ರಾಜಕೀಯ ಪಕ್ಷ ರಚನೆ ಅಸಾಧ್ಯ. ಸರಕಾರದ ವಿರೋದಿಗಳನ್ನು ನಿರ್ದಯೆಯಿಂದ ಹತ್ತಿಕ್ಕಲಾಗುತ್ತದೆ. ಕೆಲಸದ ಸ್ವಾತಂತ್ರ್ಯ ಎಲ್ಲರಿಗೂ ಇದ್ದೇಇದೆ. ಅಥವಾ ಅದೊಂದೇ ಸ್ವಾತಂತ್ರ್ಯ ಇರುವುದು. ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತ ಹೋಗುವವರಿಗೆ ಯಾವ ತೊಂದರೆಯೂ ಇಲ್ಲ. ಆದ್ದರಿಂದ ಇಲ್ಲಿ ವಾಸಿಸುವ ಹೆಚ್ಚಿನ ಸ್ಥಳೀಯರೇ ಆಗಲಿ, ವಲಸಿಗರೇ ಆಗಲಿ , ನೆಮ್ಮದಿಯಿಂದ ಇದ್ದಾರೆ. ಬುದ್ಧಿಗೆ ಕೆಲಸ ಕೊಡದಿರುವವರೇ ಇಲ್ಲಿ ಸುಖಿಗಳು.