ಈ ಮೊದಲು ಅರಾಮ್ಕೊ ಎಂಬ ಸಂಸ್ಥೆಯ ಬಗ್ಗೆ ಬರೆದಿದ್ದೆ. ಅದು ಜಾಗತಿಕವಾಗಿ ಪೆಟ್ರೋಲಿಯಂ ಕ್ಷೇತ್ರದ ವ್ಯವಹಾರಗಳನ್ನು ನೋಡಿಕೊಳ್ಳುವ ಸಂಸ್ಥೆ. ಈಗ ಅಲ್ಮರೈ ಎಂಬ ಸಂಸ್ಥೆಯ ಬಗ್ಗೆ ಬರೆಯುತ್ತಿದ್ದೇನೆ. ಇದು ನಮ್ಮ ಕರ್ನಾಟಕದ ನಂದಿನಿ ( ಕೆಎಂಎಫ್) , ಅಥವಾ ಗುಜರಾತದ ಅಮುಲ್ ತರಹ ಹಾಲು ಹೈನದ ಉತ್ಪಾದನೆಗಳನ್ನು ಒದಗಿಸುವ ಒಂದು ಅತ್ಯುತ್ಕೃಷ್ಟ ವ್ಯವಸ್ಥೆ. ಆದರೆ ಇದರ ಸ್ವರೂಪ ಬಹಳ ದೊಡ್ಡದು. ಸೌದಿ ರಾಜಧಾನಿ ರಿಯಾದ್ ನಲ್ಲಿ ಇದರ ಮುಖ್ಯ ಕಚೇರಿ ಇದ್ದರೂ ಏಳು ದೇಶಗಳ ವ್ಯಾಪ್ತಿಯಲ್ಲಿ 220000 ಅಂಗಡಿಗಳನ್ನು ತಲುಪುತ್ತದಲ್ಲದೆ , ಹಾಲು, ಮೊಸರು, ಮಜ್ಜಿಗೆಗಳಲ್ಲದೆ ಇದು ಪೌಲ್ಟ್ರಿ ಉತ್ಪನ್ನಗಳನ್ನು ಮತ್ತು ಬೇಕರಿ ಉತ್ಪನ್ನಗಳನ್ನು ಸಹ ಉತ್ಪಾದಿಸಿ ಪೂರೈಸುತ್ತದೆ.
೧೯೭೭ ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ತನ್ನ ಉತ್ಪನ್ನಗಳ ಗುಣಮಟ್ಟವನ್ನು ಸದಾ ಕಾದುಕೊಂಡಿದೆ. ಪ್ರತಿ ದಿನ ೪ ಮಿಲಿಯನ್ ಗೂ ಹೆಚ್ಚು ಲೀಟರ್ ಹಾಲನ್ನು ಇದು ವಿತರಿಸುತ್ತದೆ. ಒಟ್ಟು ೯೨ ಮಿಲಿಯನ್ ಗ್ರಾಹಕರನ್ನು ತಲುಪುತ್ತದೆ. ೯ ಸಾವಿರ ವಾಹನಗಳನ್ನು ಹೊಂದಿದೆ. ಏಳು ಬ್ರಾಂಡ್ ಗಳಲ್ಲಿ ೬೨೨ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತದೆ. ಇದರ ಆದಾಯ ವಾರ್ಷಿಕವಾಗಿ ಒಂದು ಸತಕೊಟಿ ಡಾಲರುಗಳಿಗೆ ಮೀರಿದ್ದು. ಮಧ್ಯಪ್ರಾಚ್ಯದ ದೇಶಗಳಲ್ಲದೆ ಉತ್ತರ ಆಫ್ರಿಕಾ ಇಜಿಪ್ತ , ಜೋರ್ಡಾನ್ ಮೊದಲಾದ ದೇಶಗಳನ್ನು ಸಹ ಅಲ್ಮರೈ ಉತ್ಪನ್ನಗಳು ತಲುಪುತ್ತವೆ. ಹಾಲು ಮಜ್ಜಿಗೆ ಮೊಸರುಗಳಲ್ಲದೆ ಸೇಬು, ದ್ರಾಕ್ಷಿ, ಕಿತ್ತಳೆ , ದಾಳಿಂಬೆ, ಮಾವು, ಅನಾನಸು ಮೊದಲಾದ ಹಣ್ಣುಗಳ ಜ್ಯೂಸ್,ಖರ್ಜೂರದ ಹಾಲು, ಬ್ರೆಡ್, ತೆಂಗಿನಕಾಯಿ ಸ್ವಿಸ್ ರೋಲ್, ಬಟಾಟೆ ಬರ್ಗರ್ ಬನ್ , ಕ್ರೀಮ್ ಚೀಸ್ ಸ್ಯಾಂಡ್ವಿಚ್ ಇತ್ಯಾದಿ ಉತ್ಪನ್ನಗಳಿಗೂ ಅಲ್ಮರೈ ಹೆಸರಾಗಿದೆ.
ಉತ್ಪಾದನೆಗಳ ಗುಣಮಟ್ಟ ಕಾದುಕೊಳ್ಳಲು ೩೯೦೦೦ ಸಲ ಗುಣಮಟ್ಟದ ಪರಿಕ್ಷೆ ನಡೆಸಲಾಗುತ್ತದೆ. ಈ ಕಂಪನಿ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಹಲವು ಸಲ ಪಡೆಯುತ್ತಬಂದಿದೆ. ಸೌದಿ ಅರಸನೇ ಇದರ ಆಡಳಿತ ಮಂಡಳಿಯ ಅಧ್ಯಕ್ಷನಾಗಿದ್ದಾನೆ. ಅಲ್ಮರೈ ಸ್ವತಃ ವಿಶ್ವದರ್ಜೆಯ ಫಾರ್ಮಗಳನ್ನು ಹೊಂದಿದೆ. ಉತ್ಪಾದನಾ ಕಾರ್ಯಾಚರಣೆ ಮತ್ತು ವಿತರಣಾ ವ್ಯವಸ್ಥೆಗಳು ಬಹಳ ವ್ಯವಸ್ಥಿತವಾಗಿ ನಡೆಯುತ್ತವೆ.
ಗಮನಿಸಬೇಕಾದ ಸಂಗತಿಯೆಂದರೆ ಸಂಸ್ಥೆ ತನ್ನ ಉತ್ಪನ್ನಗಳ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಯಾವುದೇ ಬಗೆಯ ಭ್ರಷ್ಟಾಚಾರ, ಅದಕ್ಷತೆ, ನಿರ್ಲಕ್ಷ್ಯಗಳಿಗೆ ಇಲ್ಲಿ ಅವಕಾಶವಿಲ್ಲ. ನಮ್ಮ ದೇಶದಲ್ಲೂ ಇಂತಹ ಸಂಸ್ಥೆಗಳಿಲ್ಲವೆಂದಲ್ಲ. ಆದರೆ ಅವುಗಳ ನಿರ್ವಹಣೆಯಲ್ಲಿ ದಕ್ಷತೆ, ಶಿಸ್ತು, ಪ್ರಾಮಾಣಿಕತೆಗಳ ಕೊರತೆ ಕಂಡುಬರುತ್ತದೆ. ಸೌದಿ ಅರೇಬಿಯಾದಲ್ಲಿ ಕಾನೂನು ಬಹಳ ಕಠಿಣ ಸ್ವರೂಪದ್ದಾಗಿರುವುದರಿಂದ ಇಲ್ಲಿ ಅಂತಹದಕ್ಕೆಲ್ಲ ಅವಕಾಶವಿಲ್ಲ. ಜನ ಕಾನೂನಿಗೆ ಅಂಜುವಂತಾದಾಗ ಅನಿವಾರ್ಯವಾಗಿಯಾದರೂ ಅವರು ಪ್ರಾಮಾಣಿಕರಾಗಲೇಬೇಕಾಗುತ್ತದೇನೊ.
ಸೌದಿಯ ವೈಶಿಷ್ಟ್ಯವೆಂದರೆ ಇಲ್ಲಿಯ ಸಣ್ಣ ಅಥವಾ ದೊಡ್ಡ ಹೊಟೆಲು, ರೆಸ್ಟೋರೆಂಟ್ ಗಳಲ್ಲಿ ತುಂಬ ಸ್ವಚ್ಛತೆಯನ್ನು ಕಾದುಕೊಳ್ಳಲಾಗುತ್ತದೆ. ಅಡಿಗೆ ಮನೆಗಳು ಸಹ ಗ್ರಾಹಕರಿಗೆ ಕಾಣುವಂತೆಯೆ ಇರಬೇಕೆಂಬ ನಿಯಮವಿದೆ. ಇಲ್ಲಿನ ಮುನಸಿಪಲ್ ಆಡಳಿತ ಪದೇ ಪದೇ ತಪಾಸಣೆ ನಡೆಸುತ್ತಿರುತ್ತದೆ ಮತ್ತು ಅಸ್ವಚ್ಛತೆ ಅಥವಾ ಗುಣಮಟ್ಟದ ದೋಷ ಕಂಡುಬಂದಲ್ಲಿ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಇದು ಗಮನಾರ್ಹ.
✒️ಎಲ್ .ಎಸ್ .ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ