ಸೌದಿ ಪ್ರವಾಸಾನುಭವ -53
ಸೌದಿ ಅರೇಬಿಯಾದ ಸಾಮಾಜಿಕ ಬದುಕು,
ಉದ್ಯೋಗ, ವೇತನ ಇತ್ಯಾದಿ…..

ವಿಶ್ವದ ಶ್ರೀಮಂತ ರಾಷ್ಟ್ರವೆಂದೇ ಪರಿಗಣಿಸಲ್ಪಡುವ ಸೌದಿ ಅರೇಬಿಯಾದಲ್ಲಿ ಬಡವರು/ ಬಡತನ ಇಲ್ಲವೇ? ಸಮೀಕ್ಷೆಯ ಪ್ರಕಾರ ಸೌದಿಯಲ್ಲಿ ಬಡತನದ ಪ್ರಮಾಣ ಶೇ. 13.6%. ಅರಬ್ ರಾಷ್ಟ್ರಗಳಲ್ಲಿ ಕತಾರ್ ನಲ್ಲಿ ಈ ಪ್ರಮಾಣ ಬಹಳ ಕಡಿಮೆ. ಶೇ. 4%, ಬಹ್ರೇನನಲ್ಲಿ ಶೇ 7.5 , ಓಮನ್ ನಲ್ಲಿ ಶೇ. 10.1 ರಷ್ಟು. ಆದರೂ 2010 ರಿಂದ ಸೌದಿಯಲ್ಲಿ ಬಡತನದ ಪ್ರಮಾಣ ಸಾಕಷ್ಟು ಇಳಿಮುಖವಾಗುತ್ತ ಬಂದಿದೆ.
ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವವರಲ್ಲಿ ವಿದೇಶಿ ವಲಸಿಗರ ಸಂಖ್ಯೆ ಬಹಳ ದೊಡ್ಡದು. ಸ್ಥಾನಿಕರ ಮತ್ತು ವಲಸಿಗರ ನಡುವಿನ ವೇತನ ಪ್ರಮಾಣದಲ್ಲೂ ವ್ಯತ್ಯಾಸಗಳಿವೆ. ಇಲ್ಲಿ ಕೆಲಸಗಾರರ / ಕಾರ್ಮಿಕರ ವೇತನಾದಿಗಳ ಮೇಲ್ವಿಚಾರಣೆಯನ್ನು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ನೋಡಿಕೊಳ್ಳುತ್ತದೆ. ಕಾರ್ಮಿಕ ನ್ಯಾಯಾಲಯವೂ ಇದೆ. ಇಲ್ಲಿಯ ಖಾಸಗಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಸಂಬಂಧಪಟ್ಟ ನಿಯಮಗಳು ಬಹಳ ಬಿಗಿಯಾಗಿವೆ. ಕೆಲಸಗಾರರಿಗೆ ಸಮಯಕ್ಕೆ ಸರಿಯಾಗಿ ವೇತನ ಕೊಡದಿರುವ ಮಾಲಕನೂ ಶಿಕ್ಷಾರ್ಹನೆನಿಸುತ್ತಾನೆ.
ಸೌದಿಯಲ್ಲಿ ಒಬ್ಬ ಸಾಮಾನ್ಯ ಕೆಲಸಗಾರನ ಕನಿಷ್ಠ ವೇತನ ೩೦೦೦ ಸೌದಿ ರಿಯಾಲ್ ಇರಬೇಕಾದ್ದು ಕಡ್ಡಾಯ. ೨೦೧೫ ರಿಂದ ಈ ನಿಯಮ ಜಾರಿಗೆ ಬಂದಿದೆ. ( ೩ ಸಾವಿರ ರಿಯಾಲ್ ಎಂದರೆ ಸುಮಾರು ೮೦೦ ಯುಎಸ್ ಡಾಲರ್ ಅಥವಾ ಭಾರತದ ೬೬೦೦೦ ರೂ. ). ಈಚೆಗೆ ಕನಿಷ್ಠ ವೇತನ ೪ ಸಾವಿರಕ್ಕೆ ಏರಿಸಲಾಗಿದೆಯೆನ್ನಲಾಗಿದೆ. ಅರೆಕಾಲಿಕ ಕೆಲಸಗಾರರಿಗೆ ಕನಿಷ್ಠ ವೇತನ ೧೫೦೦ ರಿಯಾಲ್ ಗಳು. ಇವರಲ್ಲಿ ಸಾಮಾಜಿಕವಾಗಿ ಬಡ, ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಗಳೆಂದು ವಿಭಜಿಸಬಹುದಾಗಿದೆ. ವೈದ್ಯರು, ಇಂಜಿನಿಯರುಗಳು, ಉನ್ನತ ಅಧಿಕಾರಿಗಳು, ವ್ಯಾಪಾರಿ ಮಾಲಿಕರು ಇವರನ್ನೆಲ್ಲ ಇಲ್ಲಿ ಶ್ರೀಮಂತರ ವರ್ಗಕ್ಕೆ ಸೇರಿಸುವದಿಲ್ಲ. ಅವರನ್ನು ಮೇಲ್ಮಧ್ಯಮ ವರ್ಗದವರೆಂದು ಪರಿಗಣಿಸಲಾಗುತ್ತದೆ. ಕೃಷಿ , ಮನೆಗೆಲಸದವರಿಗೆ ಬೇರೆಯೇ ಆದ ಕನಿಷ್ಠ ವೇತನ ಪ್ರಮಾಣವಿರುತ್ತದೆ. ಇಲ್ಲಿ ಮೇಲ್ ಮಧ್ಯಮ ವರ್ಗದವರು ಕಾರು, ಸ್ಮಾರ್ಟಫೋನು, ಆಧುನಿಕ ಸೌಕರ್ಯಗಳನ್ನು ಹೊಂದಿರುತ್ತಾರೆ.
ಇಲ್ಲಿಯ ಉದ್ಯೋಗಿಗಳಿಗೆ ಡಿಸೆಂಬರ್ ತಿಂಗಳಲ್ಲಿ ೧೩ ನೇ ತಿಂಗಳ ಬೋನಸ್, ಜೂನ್ ನಲ್ಲಿ ವಾರ್ಷಿಕ ಬೋನಸ್, ನಿವೃತ್ತಿ ನಂತರ ಗ್ರ್ಯಾಚ್ಯುಟಿ ಲಭ್ಯ. ವೇತನಕ್ಕೆ ಯಾವುದೇ ಕರತೆರಿಗೆಯಿಲ್ಲ. ಕೆಲಸಗಾರರಿಗೆ ಕಾನೂನು ರಕ್ಷಣೆ, ವಿಮಾ ಸೌಲಭ್ಯಗಳಿವೆ. ಸ್ಥಾನಿಕ ಸೌದಿಗಳಿಗೆ ವಿಶೇಷ ಸೌಲಭ್ಯವಿದೆ. ವಿದೇಶಿ ಕೆಲಸಗಾರರಿಗೆ ಸರಾಸರಿ ಮಾಸಿಕ 11 ಸಾವಿರ ರಿಯಾಲ್ ವೇತನವಿದ್ದು ತೈಲ ಮತ್ತು ಅನಿಲ ಕ್ಷೇತ್ರದವರಿಗೆ ೨೦ ಸಾವಿರದತನಕ ವೇತನ ಸಿಗುತ್ತದೆ. ೩೦ ದಿವಸಗಳ ವಾರ್ಷಿಕ ವೇತನ ರಜೆ ಕಡ್ಡಾಯ. ಸಮಯಕ್ಕೆ ಸರಿಯಾಗಿ ಮಾಲಕ ಸಂಬಳ ಕೊಡಲೇಬೇಕು. ಈಗ ವರ್ಷಕ್ಕೆ ಶೇ. ೫ ರಂತೆ ಸಂಬಳ ಹೆಚ್ಚಿಸಬೇಕೆಂಬ ನಿಯಮ ಬಂದಿದೆ. ಸೌದಿಗಳಿಗೆ ಶಿಕ್ಷಣ ಪೂರ್ತಿ ಉಚಿತ.
ಇಲ್ಲಿಯ ಮಧ್ಯಮ ವರ್ಗದವರ ಸರಾಸರಿ ಮಾಸಿಕ ಆದಾಯ ೧೦ ರಿಂದ ೨೦ ಸಾವಿರ ರಿಯಾಲ್ ಇರುವುದರಿಂದ ಆರಾಮದಾಯಕ ಜೀವನ ಸಾಗಿಸಬಹುದಾಗಿದೆ. ೨ ಲಕ್ಷ ೬೦ ಸಾವಿರ ರಿಯಾಲ್ ಗಳಿಸುವವರು ಶ್ರೀಮಂತರ ಸಾಲಿಗೆ ಸೇರುತ್ತಾರೆ. ಆಯಾ ಹುದ್ದೆಗಳ ಪ್ರಕಾರ ವೇತನದಲ್ಲಿ ವ್ಯತ್ಯಾಸ ಇದ್ದೇಇರುತ್ತದೆ. ಕೆಲವು ಹುದ್ದೆಗಳ ವೇತನವನ್ನಿಲ್ಲಿ ಗಮನಿಸೋಣ-
* ಸಿಇಓ- 33021 ರಿಯಾಲ್ ತಿಂಗಳಿಗೆ
* ಸೀನಿಯರ್ ಮ್ಯಾನೇಜರ್- 100365
* ಸರ್ಜನ್- 480000 ( ವಾರ್ಷಿಕ),ತಾಸಿಗೆ ೨೪೬ ರಿ.
* ಹಿರಿಯ ಅನುಭವಿ ವೈದ್ಯರಿಗೆ- 495000
* ಅರಿವಳಿಕೆ ತಜ್ಞರಿಗೆ- 675000 ವಾರ್ಷಿಕ
* ಹೂಡಿಕೆ ಬ್ಯಾಂಕರ್- 61000 ವಾ.
* ಪೈಲಟ್ 233628 ವಾ.
* ಸಿ. ಇಂಜಿನಿಯರ್ -73500
* ಶಿಕ್ಷಕರಿಗೆ- 192543( ವಾ. ) ಗಂಟೆಗೆ ೯೩ ರಿ. ತೆರಿಗೆ ಮುಕ್ತ
ಇತ್ಯಾದಿ.
ಸಾಮಾನ್ಯವಾಗಿ ಸೌದಿ ಅರೇಬಿಯಾಕ್ಕೆ ಉದ್ಯೋಗಕ್ಕೆ ಬರಲು ಎಲ್ಲ ದೇಶಗಳ ಜನ ಇಷ್ಟ ಪಡುವುದಕ್ಕೆ ಹಲವು ಕಾರಣಗಳಿವೆ. ಇಲ್ಲಿ ದೊರಕುವ ತೆರಿಗೆ ರಹಿತ ಸಂಬಳದಲ್ಲಿ ಒಂದು ಕುಟುಂಬ ಸಾಕಷ್ಟು ಆರಾಮಾಗಿ ಬದುಕಬಹುದು ಮತ್ತು ಉಳಿತಾಯವನ್ನೂ ಮಾಡಬಹುದು. ಒಂದು ಅಂದಾಜಿನಂತೆ ವಿದೇಶಗಳಲ್ಲಿರುವ ಭಾರತೀಯ ಕೆಲಸಗಾರರು ವರ್ಷಕ್ಕೆ 3.5 ಶತಕೋಟಿ ಡಾಲರುಗಳಷ್ಟು ಮೊತ್ತದ ಹಣವನ್ನು ತಮ್ಮ ಮನೆಗಳಿಗೆ ಕಳಿಸುತ್ತಾರೆ. ಇಂದು ವಿಶ್ವದ ಅತಿದೊಡ್ಡ ವಲಸಿಗ ಸಮುದಾಯ ಸೌದಿ ಅರೇಬಿಯಾದಲ್ಲಿ ನೆಲೆಸಿದೆ. ಅದಕ್ಕೆ ಕಾರಣ ಅಲ್ಲಿ ದೊರಕುವ ವೇತನ ಪ್ರಮಾಣ. ತಮ್ಮಷ್ಟಕ್ಕೆ ತಾವು ಯಾವುದೇ ಉಸಾಬರಿಗೆ ಹೋಗದೆ ಕೆಲಸ ಮಾಡುವ ವಿದೇಶೀಯರಿಗೆ ಸೌದಿ ಸ್ವರ್ಗ ಸಮಾನ. ಇಲ್ಲಿ ಹತ್ತಿಪ್ಪತ್ತು ವರ್ಷಗಳಿಂದ ನೆಲೆಸಿರುವ ಭಾರತೀಯರೆಲ್ಲರ ಅಭಿಪ್ರಾಯ ಅದು.

*ಎಲ್.ಎಸ್.ಶಾಸ್ತ್ರಿ, ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ