ಶಿವರಾತ್ರಿ ಹಬ್ಬದ ಆಚರಣೆ ಪ್ರಯುಕ್ತ ಭಕ್ತರ ಇಷ್ಟಾರ್ಥ
ಸಿದ್ಧಿಸುವ ಮೋಕ್ಷದಾಯಕ ಪವಿತ್ರ ಶಿವಾಲಯಗಳಲ್ಲಿ ವಿಶೇಷ ಪೂಜಾದಿಗಳು ನಡೆಯಲಿವೆ. ಬೆಳ್ವೆ ಶ್ರೀಶಂಕರನಾರಾಯಣ, ಶಂಕರನಾರಾಯಣದ ಶ್ರೀ ಕ್ರೋಢ ಶಂಕರನಾರಾಯಣ, ಉಮಾರಮಾ ಸಹಿತ ಶ್ರೀ ಹೊಳೆಶಂಕರನಾರಾಯಣ, ಅಮಾಸೆಬೈಲು
ಮಾಂಡವಿ ಶ್ರೀ ಶಂಕರನಾರಾಯಣ, ಆವರ್ಸೆ ಶ್ರೀ ಶಂಕರನಾರಾಯಣ ಎನ್ನುವ ಪುರಾಣ ಪ್ರಸಿದ್ಧ ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲಿ ಮಾ.8 ನೇ ಶುಕ್ರವಾರ ಬೆಳಿಗ್ಗೆಯಿಂದ ಮರುದಿನ ಮುಂಜಾನೆ ತನಕ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಶಿವರಾತ್ರಿ ಪ್ರಯುಕ್ತ ಬಹಳ ಹಿಂದಿನ ವರ್ಷಗಳಿಂದಲೂ ಪುರಾಣ ಪ್ರಸಿದ್ದ ಪಂಚಶಂಕರನಾರಾಯಣ ಕ್ಷೇತ್ರಗಳನ್ನು ವರ್ಷಕೊಮ್ಮೆ ಹಲವಾರು ಭಕ್ತಾದಿಗಳು ಶಿವರಾತ್ರಿ ದಿನ ಕಾಲ್ನಡಿಗೆ
ಮೂಲಕ ತೆರಳಿ ದೇವರ ದರ್ಶನದೊಂದಿಗೆ ಪುಣ್ಯ
ಪಡೆಯುತ್ತಿದ್ದರು. ಶಿವರಾತ್ರಿಯ ದಿನದಂದು ಅಸಂಖ್ಯತ ಭಕ್ತರು ಪಂಚಶಂಕರನಾರಾಯಣ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪಂಚ ಶಂಕರನಾರಾಯಣ
ಕ್ಷೇತ್ರಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳೊಂದಿಗೆ ಇಲ್ಲಿನ ಸಾನ್ನಿಧ್ಯಗಳು ಪಾವಿತ್ರ್ಯತೆಯಿಂದ ಭಕ್ತಾದಿಗಳ ಸಂಖ್ಯೆ ಇಮ್ಮಡಿಗೊಂಡಿದೆ.

ಶಂಕರನಾರಾಯಣ: ಪುರಾಣ ಪ್ರಸಿದ್ದ ಶಂಕರನಾರಾಯಣದ ಶ್ರೀ ಕ್ರೋಢ ಶಂಕರನಾರಾಯಣ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ಗಂ 9 ರಿಂದ ಶತರುದ್ರಾಭೀಷೇಕ,ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಫಲಹಾರ, ಸಂಜೆ ಗಂ.6 ರಿಂದ ಶ್ರೀಶಂಕರನಾರಾಯಣ ಯಕ್ಷ ಸಿರಿ ಬಾಲ ಕಲಾವಿದರಿಂದ ಪೌರಣಿಕ ಪ್ರಸಂಗ ಯಕ್ಷಗಾನ, ಗಂ 9 ರಿಂದ ಮಹಾರಂಗ ಪೂಜೆ ,ಪಲ್ಲಕ್ಕಿ ಉತ್ಸವ,ಪುಷ್ಫಕ ರಥೋತ್ಸವ,ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.

ಹೊಳೆಶಂಕರನಾರಾಯಣ: ಸಿದ್ದಾಪುರ ಸಮೀಪದ
ಹೊಳೆಶಂಕರನಾರಾಯಣದಲ್ಲಿ ನಾಡೋಜ ಡಾ.ಜಿ ಶಂಕರ್‌ರವರಿಂದ ಜೀರ್ಣೋದ್ಧಾರಗೊಂಡ ಉಮಾರಮಾ ಸಹಿತ ಶ್ರೀ ಹೊಳೆಶಂಕರನಾರಾಯಣ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆಯಿಂದ ಶತರುದ್ರಾಭೀಷೇಕ, ಸಂಜೆ ಭಜನೆ, ವಿವಿಧ ಧಾರ್ಮಿಕ
ಕಾರ್ಯಕ್ರಮಗಳು, ರಂಗಪೂಜೆ ನಡೆಯಲಿದೆ.

ಬೆಳ್ವೆ: ಪುರಾಣ ಪ್ರಸಿದ್ದ ಬೆಳ್ವೆ ಶ್ರೀ ಶಂಕರನಾರಾಯಣ
ದೇವಸ್ಥಾನವು ಊರ-ಪರವೂರ ದಾನಿಗಳು, ಭಕ್ತಾಧಿಗಳ ಸಹಕಾರದೊಂದಿಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆಯಿಂದ ಪಂಚಾಮೃತ ಸಹಿತ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ,ಸಂಜೆ ವಿವಿಧ ಭಜನಾ
ಮಂಡಳಿಯವರಿಂದ ಭಜನೆ, ಗಂ 8 ಕ್ಕೆ ರಂಗ ಪೂಜೆ ನಡೆಯಲಿವೆ.

ಶ್ರೀಮಾಂಡವಿ ಶಂಕರನಾರಾಯಣ: ಅಮಾಸೆಬೈಲು ಸಮೀಪದ ಮಾಂಡವಿ ನದಿ ಸಮೀಪದ ಶ್ರೀ ಮಾಂಡವಿ ಶಂಕರನಾರಾಯಣ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು, ಸರ್ವಾಲಂಕಾರ ಪೂಜೆ, ಸಂಜೆ ಗಂ 6 ರಿಂದ ಭಜನೆ ಇನ್ನಿತರ ಕಾರ್ಯಕ್ರಮಗಳು
ನಡೆಯಲಿವೆ.

ಆವರ್ಸೆ ಶ್ರೀಶಂಕರನಾರಾಯಣ: ಆವರ್ಸೆ ಶ್ರೀಶಂಕರನಾರಾಯಣ ದೇವಳವು ಇತ್ತೀಚೆಗೆ ಜೀರ್ಣೋದ್ದಾರದೊಂದಿಗೆ ಪುನರ್ ಪ್ರತಿಷ್ಠಾಪನೆಗೊಂಡಿದೆ. ಇಲ್ಲಿನ ದೇವಳಕ್ಕೆ ಹಾಲಾಡಿ, ಚೇರ್ಕಿ ಮತ್ತು ಹೈಕಾಡಿ, ನಾಗೇರ್ತಿ, ಗೋಳಿಯಂಗಡಿ, ಮಂದಾರ್ತಿ ಮಾರ್ಗದ ವಂಡಾರು ಮಾವಿನಕಟ್ಟೆ ಮಾರ್ಗವಾಗಿ ದೇವಳವನ್ನು ತಲುಪ ಬಹುದಾಗಿದೆ.
ಬೆಳಿಗ್ಗೆಯಿಂದ ರುದ್ರಾಭಿಷೇಕ, ಬಾಲ ಭಜನಾ ಮಂಡಳಿಯವರಿಂದ ಭಜನೆ,ಮಧ್ಯಾಹ್ನ ಮಹಾಪೂಜೆ, ಭಜನಾ ತಂಡದವರಿಂದ ಭಜನೆ,ವಿವಿಧ
ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.