ಕೊಪ್ಪಳ : ಇಲ್ಲಿಯ ಸುಪ್ರಸಿದ್ಧ ಗವಿಸಿದ್ದೇಶ್ವರ ಮಹಾದಾಸೋಹಕ್ಕೆ ತೆರೆ ಬಿದ್ದ ಬಳಿಕ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.
ಈ ಕಾರ್ಯಕ್ಕೆ ನೂರಾರು ಭಕ್ತರು ಕೈಜೋಡಿಸಿದ್ದಾರೆ. ಈ ವೇಳೆ ಸ್ವತಃ ಗವಿಸಿದ್ದೇಶ್ವರ ಶ್ರೀಗಳೇ ಮುಸುರೆ ತಿಕ್ಕಿ ಪಾತ್ರೆ ತೊಳೆದಿದ್ದು, ಈ ಫೋಟೋ ಭಾರೀ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಶ್ರೀಗಳ ಸರಳತೆಯನ್ನು ಕೊಂಡಾಡಿದ್ದಾರೆ. ಯಾವಾಗಲೂ ಏನಾದರೊಂದು ಕಾಯಕದಲ್ಲಿ ತೊಡಗುವ ಶ್ರೀಗಳು, ಪ್ರತಿ ಬಾರಿ ಜಾತ್ರೋತ್ಸವದಲ್ಲೂ ಸಾಮಾನ್ಯರಂತೆ ಎಲ್ಲ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾಗಿರುವ ಜಾತ್ರಾ ಮಹೋತ್ಸವವು ದಾಸೋಹ, ಜಾಗೃತಿ ಮತ್ತು ಸರ್ವಧರ್ಮ ಸಮನ್ವಯದ ಸಮಾಗಮನ. ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಜಾತ್ರೆಯಲ್ಲಿಯು ಭಕ್ತರಲ್ಲಿ, ಅಭಿಮಾನಿಗಳಲ್ಲಿ ಹಾಗೂ ಜನರಲ್ಲಿ ವಿಶಿಷ್ಟ ರೀತಿಯ ಜಾಗೃತಿ ಮೂಡಿಸುತ್ತ ಜಾತ್ರೆಗೊಂದು ಹೊಸರೂಪ-ಹೊಸಮೆರುಗು ನೀಡುವ ಮೂಲಕ ಶ್ರೀ ಮಠವು ದೇಶ, ವಿದೇಶಗಳ ಗಮನ ಸೆಳೆದಿದೆ.
ಶ್ರೀ ಗವಿಸಿದ್ದೇಶ್ವರ ಮಠ ಅಥವಾ ಗವಿಮಠವು ಕೊಪ್ಪಳದ ಪೂರ್ವ ಬೆಟ್ಟದ ಮೇಲಿರುವ ಸುಮಾರು ಒಂದು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿ ಇಂದಿಗೂ ಜನಮಾನಸದಲ್ಲಿ ಭಕ್ತಿ, ಭಾವ, ಅಭಿಮಾನಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಮುನ್ನೆಡೆಯುತ್ತಿರುವ ಮಹಾಸಂಸ್ಥಾನ. ತ್ರಿವಿಧ ದಾಸೋಹದ (ಅನ್ನ, ಅರಿವು, ಆಧ್ಯಾತ್ಮ) ಗಂಗೋತ್ರಿ. ಕರ್ನಾಟಕದ ಅಗ್ರಮಾನ್ಯ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠವು ಒಂದು.
ಜಾತ್ರೆಯ ವಿಶೇಷ ದಾಸೋಹಕ್ಕಾಗಿ ಸುತ್ತಮತ್ತಲಿನ ಗ್ರಾಮಸ್ಥರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ದವಸ-ಧಾನ್ಯ, ಹಣ, ರೊಟ್ಟಿ, ಮೊದಲಾದ ರೂಪದಲ್ಲಿ ದಾನ ಹರಿದುಬರುತ್ತದೆ.
ಪ್ರತಿವರ್ಷವು ಜಾತ್ರೆಯಲ್ಲಿ ಸಮಾಜಿಕ ಅರಿವು ಮೂಡಿಸಿ ಜನರನ್ನು ಜಾಗೃತಗೊಳಿಸುವ ವಿಶಿಷ್ಟ ಕಾರ್ಯಕ್ರಮ ನಡೆಯುತ್ತದೆ.