ಮಂಗಳೂರು : ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಬುಧವಾರವೂ ಮುಂದುವರಿದಿದೆ. ಕರಾವಳಿಯಲ್ಲಿ ಮೇ 6 ಮತ್ತು 7 ರಂದು ಸಣ್ಣ ಪ್ರಮಾಣದಲ್ಲಿ ಮಳೆಯ ಮುನ್ಸೂಚನೆ ಇದೆ.

ಬುಧವಾರ ಜಿಲ್ಲೆಯಲ್ಲಿ ಮೋಡ ಸಹಿತ ಬಿಸಿಲಿನ ಝಳ ಕಂಡುಬಂದಿದೆ. ದಿನದ ಸರಾಸರಿ ಗರಿಷ್ಠ ತಾಪಮಾನ 36.4 ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ತಾಪಮಾನ ಏರಿಕೆಯಾಗಿದೆ. ಕೊಕ್ಕಡದಲ್ಲಿ ಗರಿಷ್ಠ 37.4 2 ಸೆಲ್ಸಿಯಸ್, ಬೆಳ್ತಂಗಡಿ 36.7 ಡಿಗ್ರಿ ಸೆಲ್ಸಿಯಸ್, ಕಡಬದಲ್ಲಿ 39.3 ಸೆಲ್ದಿಯಸ್, ಉಪ್ಪಿನಂಗಡಿಯಲ್ಲಿ 38.1 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಗರಿಷ್ಠ 27.5 ಡಿಗ್ರಿ ಸೆಲ್ಸಿಯಸ್, ಪಣಂಬೂರಿನಲ್ಲಿ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.

ಬಿಸಿಲಿನ ತಾಪಮಾನ ತೀವ್ರತೆ ಹಿನ್ನೆಲೆಯಲ್ಲಿ ಬೆಳಗ್ಗೆ 12ರಿಂದ ಸಂಜೆ 3 ಗಂಟೆವರೆಗೆ ಬಿಸಿಲಿಗೆ ಸಂಚರಿಸದಂತೆ ಹಾಗೂ ಹೀಟ್ ಸ್ಟೋಕ್‌ಗೆ ಒಳಗಾಗದಂತೆ ಎಚ್ಚರ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆಯ
ಅಧಿಕಾರಿ ಡಾ.ರಾಜವೇಲ್ ತಿಳಿಸಿದ್ದಾರೆ.

ತುಂಬೆ ಡ್ಯಾಂ ನೀರಿನ ಮಟ್ಟ ಕುಸಿತ: ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನವೂ ಕುಸಿಯುತ್ತಲೇ ಇದೆ. ಮಂಗಳವಾರ 4.40 ಮೀಟರ್ ಇದ್ದ ನೀರಿನ ಮಟ್ಟ ಬುಧವಾರ 4.34 ಮೀಟರ್‌ಗೆ ಇಳಿಕೆಯಾಗಿದೆ. ಎಎಂಆರ್ ಡ್ಯಾಂ ನೀರಿನ ಮಟ್ಟವೂ 15.98 ಮೀಟರ್‌ನಿಂದ 15.96 ಮೀಟರ್ ತಲುಪಿದೆ. ಪ್ರಸಕ್ತ ಹರೇಕಳ ಡ್ಯಾಂನಿಂದ ನಿತ್ಯವೂ 50ರಿಂದ 60 ಎಂಎಲ್‌ಡಿ ನೀರು ತಂಬೆ ಡ್ಯಾಂಗೆ ಪಂಪ್ ಮಾಡಲಾಗುತ್ತಿದೆ. ತುಂಬೆ ಡ್ಯಾಂನಿಂದ ಮಂಗಳೂರಿಗೆ ದಿನವೂ 155 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ವಾರದ ಬಳಿಕ ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಸಲು ಜಿಲ್ಲಾಡಳಿತ ನಿರ್ಧರಿಸಲಿದೆ. ಬಿರು ಬೇಸಗೆಯ ಸದ್ಯದ ಪರಿಸ್ಥಿತಿಯಲ್ಲಿ ಬಿಳಿಯೂರು, ಎಎಂಆರ್. ಹರೇಕಳ ಡ್ಯಾಂನಲ್ಲೂ ನೀರಿನ ಕೊರತೆ ತಲೆದೋರುತ್ತಿದೆ. ತಕ್ಷಣಕ್ಕೆ ಮಹಾನಗರಕ್ಕೆ ನೀರು ಪೂರೈಕೆಯಲ್ಲಿ ರೇಷನಿಂಗ್ ಬಗ್ಗೆ ನಿರ್ಧರಿಸಿಲ್ಲ ಎಂದು ಪಾಲಿಕೆ ಆಡಳಿತ ತಿಳಿಸಿದೆ.